Connect with us

UDUPI

ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಂದಾಪುರ ಬಿಜೆಪಿ ಜಗಳ

ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಂದಾಪುರ ಬಿಜೆಪಿ ಜಗಳ

ಉಡುಪಿ ನವೆಂಬರ್ 17: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಬಿಜೆಪಿಯರಿಂದಲೇ ಅವಮಾನ ಮಾಡಲಾಗಿದೆ.

ಈ ಇಬ್ಬರು ಬಿಜೆಪಿ ಮುಖಂಡರು ವಿರುದ್ಧ ಅವಹೇಳನಕಾರಿ ಬರಹ ಹಾಗೂ ಇಬ್ಬರೂ ಜೊತೆಯಲ್ಲಿರುವ ಅಶ್ಲೀಲ ಫೋಟೋವೊಂದು ಸೋಶಿಯಲ್ ಮೀಡಿಯಾ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಉಡುಪಿಯ ಕುಂದಾಪುರ ಕ್ಷೇತ್ರ ಬಿಜೆಪಿಯ ಎರಡು ಬಣಗಳ ಕಿತ್ತಾಟ ಮತ್ತೆ ಮುಂದುವರೆದಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಾಟ್ಸಾಪ್ ಜಾಲತಾಣದ ಮೂಲಕ ಮೂಲ ಬಿಜೆಪಿ ಬಣದಲ್ಲಿ ಗುರುತಿಸಿಕೊಂಡವರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವಹೇಳನಕಾರಿಯಾದ ಚಿತ್ರಗಳನ್ನು ರವಾನಿಸಿ ಅವಮಾನ ಮಾಡಿರುವುದಾಗಿ ಉಡುಪಿಯ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕಿಶೋರ್ ಕುಮಾರ್ , ಮುಖಂಡ ರಾಜು ಪೂಜಾರಿ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ. ಇವರೆಲ್ಲರೂ ಮೂಲ ಬಿಜೆಪಿಗರಾಗಿದ್ದು ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಯನ್ನು ವಿರೋಧಿಸಿದವರಾಗಿದ್ದಾರೆ.

ಕಳೆದ ನವೆಂಬರ್ 13 ರಂದು ಕುಂದಾಪುರದಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮುಂಭಾಗದಲ್ಲಿಯೇ ಹಾಲಾಡಿ ಬಣ ಹಾಗೂ ಮೂಲ ಬಿಜೆಪಿ ಬಣ ಕಿತ್ತಾಡಿಕೊಂಡಿತ್ತು.

ಈ ವೇಳೆ ಸಮಾವೇಶದ ವೇದಿಕೆಯಲ್ಲಿಯೇ ಬಿಎಸ್ವೈ ಮೂಲ ಬಿಜೆಪಿಗರಿಗೆ ತೊಲಗುವಂತೆ ಸೂಚಿಸಿದ್ದರು. ಇದರಿಂದ ಅಸಮಾಧಾನಗೊಂಡ ಬಿಜೆಪಿ ಮೂಲ ಬಣದವರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ದೂರು ದಾಖಲಿಸಿದವರು.

Facebook Comments

comments