Connect with us

  BANTWAL

  ಗೃಹಖಾತೆ ರೈಗೆ, ಹೋಗುವರೇ ಪ್ರಭಾಕರ ಭಟ್ ಜೈಲ್ ಗೆ ?

  ಮಂಗಳೂರು, ಜುಲೈ 26 : ರಾಜ್ಯದ ಗೃಹ ಇಲಾಖೆಯ ಜವಾಬ್ದಾರಿ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೇಸ್ ಮುಖಂಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೆಳ್ಳಿಪ್ಪಾಡಿ ಗುತ್ತು ರಮಾನಾಥ ರೈ ಹೆಗಲ ಮೇಲೆ ಬಂದಿದೆ. ಮುಖ್ಯಮಂತ್ರಿ ಬಳಿಕದ ಪ್ರಮುಖ ಖಾತೆ ಗೃಹಖಾತೆಯಾಗಿದ್ದು, ರಮಾನಾಥ ರೈ ಈ ಖಾತೆಯನ್ನು ಸ್ವತಂತ್ರವಾಗಿ ಹೇಗೆ ನಿರ್ವಹಿಸಲಿದ್ದಾರೆ ಎನ್ನುವ ನಿರೀಕ್ಷೆಗಳು ಇದೀಗ ರಾಜ್ಯದ ಜನತೆ ಮುಂದಿದೆ. ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್ ಆಯ್ಕೆಗೊಂಡ ಬಳಿಕ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಅನುಭವಿ ಹಾಗೂ ಸಮರ್ಥ ನಾಯಕರನ್ನು ಗುರುತಿಸುವ ಜಬಾಬ್ದಾರಿಯಿದ್ದ ಪಕ್ಷದ ಹೈಕಮಾಂಡ್ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರದಿಂದ 6 ನೇ ಬಾರಿ ಶಾಸಕರಾಗಿ ಆಯ್ಕೆಯಾಗಿ ಬಂದಿರುವ ಹಿರಿಯರಾದ ರಮನಾಥ ರೈಯವರನ್ನು ಗೃಹಸಚಿವ ಸ್ಥಾನಕ್ಕೆ ತಂದು ಕೂರಿಸಿದೆ. ಅರಣ್ಯ ಮತ್ತು ಪರಿಸರ, ಜೀವಿಶಾಸ್ತ್ರ ಇಲಾಖೆಯ ಮಂತ್ರಿಯಾಗಿ ಆರಾಮವಾಗಿದ್ದ ರೈಯವರನ್ನು ಇದೀಗ ಗೃಹಖಾತೆಯಂತಹ ಮುಳ್ಳಿನ ಹಾದಿಯಲ್ಲಿ ನಡೆಯುವಂತಹ ಕಠಿಣ ಸವಾಲನ್ನು ಸರಕಾರ ನೀಡಿದೆ. ತನ್ನ ರಾಜಕೀಯ ಜೀವನದುದ್ಧಕ್ಕೂ ಸಂಘಪರಿವಾರ ಅದರಲ್ಲೂ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ವಿರುದ್ಧ ಸಮರ ಸಾರಿಕೊಂಡೇ ಬಂದಿರುವ ರಮಾನಾಥ ರೈ ಗೆ ಇದೀಗ ಪ್ರಭಾಕರ್ ಭಟ್ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಖಾತೆಯೇ ಲಭಿಸಿದೆ ಎಂದರೆ ತಪ್ಪಾಗಲಾರದು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾಗ ಅವರ ಮುಂದಿದ್ದ ಪ್ರಮುಖ ಗುರಿಯೆಂದರೆ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಜೈಲುಕಂಬಿ ಎಣಿಸುವಂತೆ ಮಾಡುವುದಾಗಿತ್ತು. ಈ ವಿಚಾರವನ್ನು ರಮಾನಾಥ ರೈಗಳು ಸಾಕಷ್ಟು ಬಾರಿ ಬಹಿರಂಗವಾಗಿಯೇ ಹೇಳಿಕೊಂಡಿದ್ದು, ಇದೀಗ ರಮಾನಾಥ ರೈ ಯವರ ಕೈಯಲ್ಲೇ ಗೃಹಖಾತೆಯಿರುವಾಗ ಈ ಬಾರಿ ಖಂಡತವಾಗಿಯೂ ಕಲ್ಲಡ್ಕ ಪ್ರಭಾಕರ ಭಟ್ ಜೈಲು ಸೇರುವುದು ಖಚಿತ ಎನ್ನುವ ನಿರೀಕ್ಷೆ ರಮಾನಾಥ ರೈ ಆಪ್ತ ವಲಯದಲ್ಲಿದ್ದರೆ, ಯಾವುದೇ ಕುತಂತ್ರ ನಡೆಸಿಯಾದರೂ, ತಮ್ಮ ನಾಯಕನನ್ನು ಜೈಲಿಗಟ್ಟುವ ಪ್ರಯತ್ನವನ್ನು ರಮಾನಾಥ ರೈ ಮಾಡಲಿದ್ದಾರೆ ಎನ್ನುವ ಆತಂಕ ಆರ್.ಎಸ್.ಎಸ್ ವಲಯದಲ್ಲೂ ಇಲ್ಲದಿಲ್ಲ. ಅಲ್ಪಸಂಖ್ಯಾತರ ಹಿತೈಷಿ ಎಂದೇ ಗುರುತಿಸಲ್ಪಟ್ಟರುವ ರಮಾನಾಥ ರೈ ಗೃಹಸಚಿವರಾಗಿ ಅಧಿಕಾರ ವಹಿಸುತ್ತಿರುವುದು ಅಲ್ಪಸಂಖ್ಯಾತ ಸಮುದಾಯದಲ್ಲಿ ಭಾರೀ ಭರವಸೆಯನ್ನೇ ಮೂಡಿಸಿದೆ. ಅಲ್ಲದೆ ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ, ಮರ ಸಾಗಾಟ ಹಾಗೂ ಇನ್ನಿತರ ವ್ಯವಹಾರಗಳಿಗೆ ಕಡಿವಾಣ ಬೀಳುವ ಬದಲು ಅವುಗಳು ಇನ್ನಷ್ಟು ಹೆಚ್ಚಾಗಿ ನಡೆಯುವ ಸಾಧ್ಯತೆಯೂ ಇದೆ. ಅದರಲ್ಲೂ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿರುವ ದೊಡ್ಡ ಹಿಂಬಾಲಕರ ಗುಂಪು ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಆಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುತ್ತಾರೋ, ಬೆಂಬಲ ನೀಡುತ್ತಾರೋ ಎನ್ನುವ ಕುತೂಹಲ ಕೂಡಾ ಇದೀಗ ರಮಾನಾಥ ರೈಗಳು ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹುಟ್ಟಿಕೊಂಡಿದೆ.
  ಒಂದೆಡೆ ಆಡಳಿತದ ಪ್ರಮುಖ ಖಾತೆಯನ್ನೇ ಹೊಂದಿರುವ ರಮಾನಾಥ ರೈಗಳು ಈ ಖಾತೆಯನ್ನೇ ಉಪಯೋಗಿಸಿಕೊಂಡು ತನ್ನ ರಾಜಕೀಯ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಆದರೆ ರೈಗಳ ಈ ಲೆಕ್ಕಾಚಾರಗಳು ಕೆಲವು ವಿಚಾರಗಳಲ್ಲಿ ತಪ್ಪಾಗುವ ಸಾಧ್ಯತೆಗಳೂ ಹೆಚ್ಚಾಗಿವೆ. ಗೃಹಖಾತೆಯಂತಹ ಜವಾಬ್ದಾರಿ ಹೊತ್ತ ಬಳಿಕ ರಾಜ್ಯದ ಕಾನೂನು ಹಾಗೂ ಸುವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದ ಒತ್ತಡ ಅವರ ಮೇಲೆ ಬೀಳುವುದರ ಜೊತೆಗೆ ರಾಜ್ಯ ರಾಜಧಾನಿಯಲ್ಲಿದ್ದೇ ಅದನ್ನು ನಿಭಾಯಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ತನ್ನ ಸ್ವಕ್ಷೇತ್ರವಾದ ಬಂಟ್ವಾಳದ ಕಡೆಗೆ ಗಮನಹರಿಸುವುದು ರಮಾನಾಥ ರೈಗಳಿಗೆ ಕಷ್ಟವಾಗಲಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆಯೂ ಘೋಷಣೆಯಾಗಲಿದ್ದು, ಇದು ಅವರ ರಾಜಕೀಯದ ಮೇಲೆ ದುಷ್ಪರಿಣಾಮವನ್ನೂ ಬೀರಲಿರುವುದು ಮಾತ್ರ ಸತ್ಯ. ರಮಾನಾಥ ರೈಯವರು ರಾಜ್ಯದ ಗೃಹಖಾತೆಯನ್ನು ವಹಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಡಲಿದೆ ಎನ್ನುವ ಮಾತುಗಳು ಇದೀಗ ಅವರ ರಾಜಕೀಯ ಶತ್ರುಗಳಿಂದ ಕೇಳಿಬರುತ್ತಿದೆ. ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ರೈಗಳು ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ನಿಯಂತ್ರಿಸಲು ಸಂಪೂರ್ಣ ವಿಫಲರಾಗಿದ್ದು, ಇನ್ನು ಇಡೀ ರಾಜ್ಯವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎನ್ನುವ ಪ್ರಶ್ನೆಯೂ ಇದೀಗ ಈ ವರ್ಗದಿಂದ ಕೇಳಿಬರುತ್ತಿದೆ. ಒಟ್ಟಾರೆಯಾಗಿ ಸರಕಾರದ ಪ್ರಮುಖ ಖಾತೆಯನ್ನು ವಹಿಸಿಕೊಂಡ ರಮಾನಾಥ ರೈಗೆ ಇದು ಮುಳ್ಳಿನ ಹಾದಿ ಎನ್ನುವುದು ಸುಳ್ಳಲ್ಲ.

  Share Information
  Advertisement
  Click to comment

  You must be logged in to post a comment Login

  Leave a Reply