UDUPI
ಸೇವೆಯೊಂದಿಗೆ ಲಾಭದತ್ತ ಕ.ರಾ.ರ.ಸಾ.ನಿಗಮ ; ಗೋಪಾಲ ಪೂಜಾರಿ
ಸೇವೆಯೊಂದಿಗೆ ಲಾಭದತ್ತ ಕ.ರಾ.ರ.ಸಾ.ನಿಗಮ ; ಗೋಪಾಲ ಪೂಜಾರಿ
ಉಡುಪಿ, ಮಾರ್ಚ್ 22 : ನಷ್ಟದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅತ್ಯುತ್ತಮ ಸೇವೆ ನೀಡುವ ಜೊತೆಗೆ ಲಾಭ ಗಳಿಕೆಯತ್ತ ಮುನ್ನಡೆಯುತ್ತಿದ್ದು, ಫೆಬ್ರವರಿ ಅಂತ್ಯದ ವೇಳೆಗೆ 10 ಕೋಟಿ ರೂ ಲಾಭ ಗಳಿಸಿದೆ ಎಂದು ಬೈಂದೂರು ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಅವರು ಬೈಂದೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದ ವತಿಯಿಂದ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಬೈಂದೂರು ಬಸ್ ನಿಲ್ದಾಣದ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದರು.
ಕಳೆದ ಬಾರಿಯ ಬಜೆಟ್ ಸಿದ್ದತೆ ವೇಳೆಯಲ್ಲಿ ಈ ಬಾರಿ ಕೆ.ಎಸ್.ಆರ್.ಟಿ.ಸಿ 250 ಕೋಟಿ ರೂ ನಷ್ಟ ಅನುಭವಿಸಲಿದೆ ಎಂದು ಅಂದಾಜಿಸಲಾಗಿತ್ತು,
ಡೀಸೆಲ್ ದರ ಹೆಚ್ಚಾದರೂ ಸಹ ಪ್ರಯಾಣಿಕರ ಮೇಲೆ ಅದರ ಹೊರೆಯನ್ನು ಹೇರದೆ ನಿಗಮದಲ್ಲಿನ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು,
ರಾಜ್ಯಾದ್ಯಂತ ಎಲ್ಲಾ ನಿಗಮಗಳಿಗೆ ಭೇಟಿ ನೀಡಿ, ನಿರಂತರ ಸಭೆ ನಡೆಸಿದರ ಫಲವಾಗಿ ಇದೇ ಪ್ರಥಮ ಬಾರಿಗೆ ನಿಗಮವು ಲಾಭ ಗಳಿಕೆಯತ್ತ ಮುನ್ನಡೆದಿದ್ದು,
ಫೆಬ್ರವರಿ ಅಂತ್ಯದ ವೇಳೆಗೆ 10 ಕೋಟಿ ರೂ ಲಾಭ ಗಳಿಸಿದ್ದು, ಮಾರ್ಚ್ ಅಂತ್ಯದ ವೇಳೆಗೆ ಲಾಭದ ಪ್ರಮಾಣ ಇನ್ನೂ ಅಧಿಕವಾಗಲಿದೆ ಎಂದು ಗೋಪಾಲ ಪೂಜಾರಿ ಹೇಳಿದರು.
ನಿಗಮದಲ್ಲಿನ ಸಿಬ್ಬಂದಿಗಳಿಗೆ ನಿರಂತರವಾಗಿ ಕಾರ್ಯಾನುಷ್ಟಾನಕ್ಕೆ ಪೂರಕ ಪ್ರೋತ್ಸಾಹ ನೀಡುತ್ತಿದ್ದು, ಸಿಬ್ಬಂದಿಗಳಿಗೆ ವೇತನ ಹೆಚ್ಚಳ, ಉತ್ತಮ ಚಾಲಕ, ನಿರ್ವಾಹಕರಿಗೆ ಬಹುಮಾನ ವಿತರಣೆ ಮಾಡುತ್ತಿದ್ದು,
ಸಿಬ್ಬಂದಿಗಳ ಆರೋಗ್ಯ ನಿರ್ವಹಣೆ ಸಂಬಂಧ ಜಯದೇವ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 40 ವರ್ಷ ಮೀರಿದ ಎಲ್ಲಾ ಸಿಬ್ಬಂದಿಗಳಿಗೆ ಕಡ್ಡಾಯ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾ ಶಂಕರ್ ಮಾತನಾಡಿ,
ರಾಜ್ಯದ ನಿಗಮವು ಇಡೀ ದೇಶದಲ್ಲಿಯೇ ಲಾಭ ಗಳಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, ಅಲ್ಲದೇ ಉತ್ತಮ ಸೇವೆಗಾಗಿ ಇದುವರೆವಿಗೆ 208 ಪ್ರಶಸ್ತಿಗಳನ್ನು ಪಡೆದಿದ್ದು, ಇದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ,
ಇತ್ತೀಚೆಗೆ ಅಂತಾರಾಷ್ಟ್ರೀಯ ಸಾರಿಗೆ ನಿಗಮಗಳಲ್ಲಿ ಕ.ರಾ.ರ.ಸಾ.ನಿಗಮವು 2 ನೇ ಸ್ಥಾನ ಪಡೆದಿದ್ದು, ಈ ಪ್ರಶಸ್ತಿ ಪಡೆದ ದೇಶದ ಪ್ರಥಮ ಸಾರಿಗೆ ನಿಗಮವಾಗಿದೆ,
ರಾಜ್ಯದಲ್ಲಿನ ಗ್ರಾಮೀಣ ಸಾರಿಗೆ ಮತ್ತು ನಗರ ಸಾರಿಗೆ ವ್ಯವಸ್ಥೆಯಲ್ಲಿ ನಷ್ಟ ಉಂಟಾದರೂ ಸಹ ಅದನ್ನು ಸರಿತೂಗಿಸಿಕೊಂಡು ಲಾಭ ಗಳಿಕೆಯತ್ತ ನಡೆದಿದೆ, ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿಯವರ ಅನಗತ್ಯ ಪೈಪೋಟಿಯನ್ನು ತಡೆಗಟ್ಟಿ, ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಿದ ಪರಿಣಾಮ ಲಾಭದಾಯಕವಾಗಿದ್ದು,
ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಸ್ಥಾನಕ್ಕೇರಿಸುವುದು ನಿಗಮದ ಎಲ್ಲಾ ನಿರ್ದೇಶಕರ, ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಗುರಿಯಾಗಿದೆ ಎಂದು ಹೇಳಿದರು.
ಬೈಂದೂರಿನ ಯಡ್ತರೆಯಲ್ಲಿ 3.28 ಎಕ್ರೆ ಜಾಗದಲ್ಲಿ, 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರ ಕೊಠಡಿ, ಮಹಿಳಾ ವಿಶ್ರಾಂತಿ ಕೊಠಡಿ, ಪ್ರಯಾಣಿಕರ ಆಸನ ವ್ಯವಸ್ಥೆ, ಉಪಹಾರ ಗೃಹ, 6 ವಾಣಿಜ್ಯ ಮಳಿಗೆಗಳು, ಸುಸಜ್ಜಿತ ಶೌಚಾಲಯ ಹಾಗೂ 10 ಬಸ್ ಅಂಕರಣಗಳು ಇರಲಿವೆ. ಮುಂದಿನ ದಿನಗಳಲ್ಲಿ ಡಿಪೋ ನಿರ್ಮಾಣದ ಉದ್ದೇಶದಿಂದ 5 ಎಕ್ರೆ ಪ್ರದೇಶವನ್ನು ಮೀಸಲಿಡಲಾಗಿದೆ.
ಕಾರ್ಯಕ್ರಮದಲ್ಲಿ, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ಕೆಡಿಪಿ ಸದಸ್ಯ ರಾಜು ಪೂಜಾರಿ, ತಾ.ಪಂ. ಸದಸ್ಯರಾದ ಸುಜಾತ, ಪ್ರಮೀಳಾ ದೇವಾಡಿಗ, ವಿಜಯಶೆಟ್ಟಿ, ಜಗದೀಶ್ ದೇವಾಡಿಗ, ಮಾಲಿನಿ, ಬೈಂದೂರು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ತಹಸೀಲ್ದಾರ್ ಕಿರಣ್ ಗೌರಯ್ಯ, ಐ.ಆರ್.ಬಿ ಯ ಯೋಗೇಂದ್ರ ಪ್ರಸಾದ್, ಮಂಗಳೂರು ವಿಭಾಗದ ಸಂಚಾರ ನಿಯಂತ್ರಣಾಧಿಕಾರಿ ಜೈಶಾಂತ್, ಮೆಸ್ಕಾಂ ನಿರ್ದೇಶಕರಾದ ರಿಯಾಜ್ ಅಹ್ಮದ್, ಸಂಜೀವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.