LATEST NEWS
ಮಂಗಳೂರು ಜೈಲಿನಲ್ಲಿ ಕೈದಿಗಳ ಬಾಡೂಟ; ದುಡ್ಡು ಕೊಟ್ಟರೆ ಎಲ್ಲವೂ ಇಲ್ಲಿ ಲಭ್ಯ.!!
ಮಂಗಳೂರು, ಜುಲೈ.19:ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಐಶಾರಾಮಿ ಜೀವನದ ಕಥಾ ಸಂಕಲನ ಲೋಕಾರ್ಪಣೆಯಾಗುತ್ತಿದ್ದಂತೆ ಇತ್ತ ಕುಖ್ಯಾತ ಕ್ರಿಮಿನಲ್ ಗಳೇ ತುಂಬಿರುವ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಕೂಡ ತಾವೇನೂ ಕಮ್ಮಿಯಿಲ್ಲ ಎಂಬಂತೆ ಐಶರಮಿ ಜೀವನ ಮೋಜು ಮಸ್ತಿ ಮಾಡುವ ಫೊಟೊಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿವೆ.
ಕೊಲೆ ಪ್ರಕರಣಗಳಲ್ಲಿ ಭಾಗಿಯಾದ 6 ಮಂದಿ ವಿಚಾರಣಾಧೀನ ಕೈದಿಗಳು ಜೈಲು ಆವರಣದ ಹಳೇ ಜೈಲಿನ ಸೆಲ್ ನೊಳಗೆ ಬಾಡೂಟ ಮಾಡುವ ಫೋಟೊಗಳು ವೈರಲ್ ಆಗಿವೆ. ಅಲ್ಲಿನ ಅಂಶಗಳನ್ನು ಗಮನಿಸಿದರೆ ಹೊರಗಿನಿಂದಲೇ ಊಟ ತರಿಸಿಕೊಂಡು ಮಜಾ ಮಾಡುತ್ತಿರುವುದಕ್ಕೆ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿರುವ ತಿನಿಸುಗಳು, ಬಾಟಲಿಗಳೇ ಸಾಕ್ಷಿಯಾಗಿವೆ. ಭಾರಿ ಭದ್ರತೆಯ ಜೈಲಿನೊಳಗೆ ಇಂಥದ್ದೊಂದು ಜೀವನ ಸಾಗಿಸಬೇಕೆಂದರೆ ಇದಕ್ಕೆ ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳ ಸಹಕಾರವಿಲ್ಲದೆ ಸಾಧ್ಯವೇ? ಎಂಬ ಪ್ರಶ್ನೆ ಸಹಜ.
ಈ ಬಗ್ಗೆ ಜೈಲು ಅಧಿಕಾರಿಗಳನ್ನು ಕೇಳಿದರೆ ಪ್ರತಿಕ್ರೀಯೆ ನೀಡಲು ನಿರಾಕರಿಸಿದ್ದಾರೆ.
ಈ ಹಿಂದೆ ಮಲಬಾರಿ ಕುಖ್ಯಾತ ಪಾತಕಿ ರಶೀದ್ ಮಲಬಾರಿ ಜೈಲಿನಲ್ಲಿದ್ದಾಗ ಇಂತಹ ಬಾಡೂಟದ ಪಾರ್ಟಿಗಳು ಆಗಾಗ ನಡೆಯುತ್ತಲೇ ಇತ್ತು.ಇದಕ್ಕಾಗಿ ಇತರ ಕೈದಿಗಳಿಂದ ಹಣ ವಸೂಲಿ ಮಾಡಲಾಗುತ್ತಿತ್ತು ಎನ್ನಲಾಗಿದೆ. ಹಿಂದೆ ಇಲ್ಲಿ ಹಲವು ತಿಂಗಳುಗಳ ಕಾಲ ಇದ್ದ ವಿಚಾರಣಾಧೀನ ಕೈದಿ ಒಬ್ಬರು ಹೇಳಿದಂತೆ ಮನೆ ಸಂಸಾರ ಹೊರತು ಪಡಿಸಿ ದುಡ್ಡು ಕೊಟ್ಟರೆ ಭೋಗಾಕ್ಕೇ ಬೇಕಾದ ಎಲ್ಲಾವೂ ಇಲ್ಲಿ ಲಭ್ಯ .
ಮೂರು ಸುತ್ತಿನ ವಿಶೇಷ ಭದ್ರತೆಯನ್ನು ಈ ಜಿಲ್ಲಾ ಜೈಲಿಗೆ ನೀಡಲಾಗಿದ್ದರೂ ಕೈದಿಗಳಿಗೆ ಬೇಕಾದ ಎಲ್ಲಾ ಬೇಕುಗಳು ಇಲ್ಲಿ ಸಿಗುತ್ತವೆ. ಯಾವ ಮಟ್ಟದಲ್ಲಿದೆ ಎಂಬುದು ಯೋಚಿಸಬೇಕಾದ ಅಗತ್ಯವಿದೆ. ಕಾವಲಿಗಾಗಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ ಇದೆಲ್ಲವೂ ಇದ್ದು , ವ್ಯರ್ಥ ಎಂಬಂತಾಗಿದೆ.