UDUPI
ಪಂಚಾಯತುಗಳಲ್ಲಿ ಮಾಹಿತಿ ಕಾರ್ಯಾಗಾರ ಮಾಡಿ : ಪ್ರಿಯಾಂಕ ಮೇರಿ ಫ್ರಾನ್ಸಿಸ್
ಪಂಚಾಯತುಗಳಲ್ಲಿ ಮಾಹಿತಿ ಕಾರ್ಯಾಗಾರ ಮಾಡಿ : ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ, ಅಕ್ಟೋಬರ್ 19 : ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಎಸ್.ಸಿ, ಎಸ್.ಟಿ ಜನರಿಗೆ ಅವರಿಗೆ ದೊರಕುವ ಸೌಲಭ್ಯ ಹಾಗೂ ಹಕ್ಕುಗಳ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಜಿಲ್ಲಾಧಿಕಾರಿಗಳ ಕೋರ್ಟ್‍ಹಾಲ್‍ನಲ್ಲಿ ನಡೆದ ವಿವಿಧ ಇಲಾಖೆಗಳ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ 2017-18 ನೇ ಸಾಲಿನ ರಾಜ್ಯವಲಯ ಮತ್ತು ಜಿಲ್ಲಾವಲಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಅಧಿಕಾರಿಗಳು ಪ್ರತೀ ಪಂಚಾಯತ್‍ಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಿರಿಸಿದ ಶೇಕಡಾ 25 ರಷ್ಟು ವೆಚ್ಚವಾದುದರ ಕುರಿತು ವರದಿಯನ್ನು ಒಪ್ಪಿಸಬೇಕು, ಅರ್ಹ ಫಲಾನುಭವಿಗಳು ಎಲ್ಲಾ ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ಕುರಿತು ಗಮನ ಹರಿಸಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಕಾನೂನು, ಆರೋಗ್ಯ ಹಾಗೂ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸುವುದರ ಮೂಲಕ ಅವರ ಕಡ್ಡಾಯ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಡಿಸೆಂಬರ್ ಒಳಗಾಗಿ ಇಲಾಖಾವಾರು ಗುರಿ ನಿಗದಿ ಪೂರ್ಣಗೊಂಡಿರಬೇಕು, ಕೊರಗ ಕಾಲನಿಗಳಲ್ಲಿರುವ ಕೊರಗ ಮಕ್ಕಳಿಗೆ ಹೆಚ್ಚುವರಿ ತರಗತಿಯನ್ನು ನೀಡಬೇಕು ಅದಕ್ಕಾಗಿ ಶೀಘ್ರವೇ ಶಿಕ್ಷಕರನ್ನು ನೇಮಿಸಬೇಕು. ಅವರಿಗೆ ನೀಡಿದ ಮನೆ ನಿವೇಶನಗಳನ್ನು ಅವರೇ ಬಳಸಿಕೊಳ್ಳುವಂತೆ ನೋಡಿಕೊಳ್ಳಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮೇಶ್ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.