UDUPI
ಜ.30ರಿಂದ ಕುಷ್ಠ ಅರಿವು ಆಂದೋಲನ :ಶಿವಾನಂದ ಕಾಪಶಿ
ಜ.30ರಿಂದ ಕುಷ್ಠ ಅರಿವು ಆಂದೋಲನ :ಶಿವಾನಂದ ಕಾಪಶಿ
ಉಡುಪಿ, ಜನವರಿ 19: ಜಿಲ್ಲೆಯಲ್ಲಿ ಸ್ಪರ್ಶ ಕುಷ್ಠ ಅರಿವು ಆಂದೋಲನ ಜನವರಿ 30ರಿಂದ ಫೆಬ್ರವರಿ 13ರವೆರೆಗೆ ನಡೆಯಲಿದೆ. ಕಾಯಿಲೆ ಬಗ್ಗೆ ಪರಿಣಾಮಕಾರಿ ಅರಿವು ಕಾರ್ಯಕ್ರಮವನ್ನು ರೂಪಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಿ ಕುಷ್ಠರೋಗ ಕಾಯಿಲೆ ವರದಿಯಾಗಿದೆ ಆ ಪ್ರದೇಶಗಳನ್ನು ಕೇಂದ್ರೀಕರಿಸಿ ಕ್ರಿಯಾ ಯೋಜನೆ ರೂಪಿಸಿ ಅರಿವು ಮೂಡಿಸಿ ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 19 ಪ್ರಕರಣಗಳು ಪತ್ತೆಯಾಗಿದ್ದು, 15 ಎಂ.ಬಿ ಮತ್ತು 4 ಪಿ.ಬಿ ಪ್ರಕರಣಗಳು ಎಂದು ಜಿಲ್ಲಾ ಕುಷ್ಠ ರೋಗಾಧಿಕಾರಿ ಡಾ. ಚಿಂಬಾಳ್ಕರ್ ವಿವರಿಸಿದರು.
ಕಳೆದ ಸಾಲಿನಲ್ಲಿ 40 ಪ್ರಕರಣಗಳು ವರದಿಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕಡಿಮೆಯಾಗಿದೆ.
ಆದರೆ ಕಾಯಿಲೆ ಪತ್ತೆ ಹಾಗೂ ಚಿಕಿತ್ಸೆ ನೀಡುವುದು ಹಲವು ಕಾರಣಗಳಿಂದ ಸವಾಲಾಗಿ ಪರಿಣಮಿಸಿದೆ ಎಂದರು.
ಖಾಯಿಲೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧ್ಯಕ್ಷರ ಮೂಲಕ ಹಾಗೂ ಗ್ರಾಮ ಸಭೆಗಳ ಮೂಲಕ ರೋಗದ ಬಗ್ಗೆ ಅರಿವು ಮೂಡಿಸುವ ಯೋಜನೆಗಳನ್ನು ರೂಪಿಸಲಾಗಿದೆ.
ರೋಗ ಪತ್ತೆ ಸವಾಲಾಗಿದ್ದು, ಸಮಗ್ರವಾಗಿ ರೋಗ ತಪಾಸಣೆ ನಡೆಸುವುದರಿಂದ ರೋಗ ನಿರ್ಮೂಲನೆ ಸಾಧ್ಯ ಎಂದು ಡಾ ಚಿಂಬಾಳ್ಕರ್ ಸಭೆಗೆ ವಿವರಿಸಿದರು.
ರೋಗ ಸಂಬಂಧ ಮಾಹಿತಿ ಶಿಕ್ಷಣ ನಿರಂತರವಾಗಿ ನಡೆಯುತ್ತಿದ್ದು, ರೋಗ ಪತ್ತೆಯಿಂದಾಗಿ ರೋಗ ತಡೆ ಸಾಧ್ಯವಾಗಿದೆ.
ಗಂಗೊಳ್ಳಿ, ಶಿರೂರು, ಬಸ್ರೂರು ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ರೋಗ ವರದಿಯಾಗಿದೆ.
ಸ್ತ್ರೀ ಶಕ್ತಿಯವರಿಗೆ ಮೆಡಿಕಲ್ ಆಫೀಸರ್ಗಳ ಮೂಲಕ ಮಾಹಿತಿ, ತಾಯಂದಿರ ಸಭೆಗೆ ಮಾಹಿತಿ ನೀಡಲಾಗುವುದು.
ರೋಗ ನಿರೋಧಕ ಶಕ್ತಿ ಕಡಿಮೆಯಿದ್ದವರಿಗೆ ಗಾಳಿಯ ಮೂಲಕ ಕಾಯಿಲೆ ಹರಡುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ರೋಹಿಣಿ ಹೇಳಿದರು. ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.