Connect with us

UDUPI

ಪಲಿಮಾರು ಶ್ರೀಗಳ 2ನೇ ಪರ್ಯಾಯ ಪ್ರಾರಂಭ

ಪಲಿಮಾರು ಶ್ರೀಗಳ 2ನೇ ಪರ್ಯಾಯ ಪ್ರಾರಂಭ

ಉಡುಪಿ ಜನವರಿ 18: ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ 2ನೇ ಪರ್ಯಾಯವನ್ನು ಆರಂಭಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಈ ಮೂಲಕ ಪಲಿಮಾರು ಶ್ರೀಗಳ ದ್ವಿತೀಯ ಪರ್ಯಾಯ ಆರಂಭವಾಯಿತು.

ಗುರುವಾರ ಬೆಳಿಗ್ಗಿನ ಜಾವ 2 ಗಂಟೆ ಸುಮಾರಿಗೆ ಪಲಿಮಾರು ಶ್ರೀಗಳ ಪರ್ಯಾಯೋತ್ಸವ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡವು, ಕಾಪು ದಂಢ ತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿದ ಪರ್ಯಾಯ ಸ್ವಾಮಿಜಿಯವರು ನೇರವಾಗಿ ಜೋಡುಕಟ್ಟೆಗೆ ಆಗಮಿಸಿ ಅಲ್ಲಿ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ವೈಭವದ ಮೆರವಣಿಗೆ ರಥಬೀದಿಯಲ್ಲಿ ಸಾಗಿತು. ಅದ್ಧೂರಿ ಸಮಾರಂಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಈ ಬಾರಿಯ ಪರ್ಯಾಯ ಕಾರ್ಯಕ್ರಮ ಹಿಂದೆಂದಿಗಿಂತಲೂ ವೈಭವದಿಂದ ನಡೆಯಿತು. ವಿದ್ಯುತ್ ಅಲಂಕರದಿಂದ ಉಡುಪಿ ನಗರಿ ಕಂಗೊಳಿಸಿದ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿತು. ನಗರದ ಜೋಡುಕಟ್ಟೆಯಲ್ಲಿ 3.15 ರ ಸುಮಾರಿಗೆ ಅಷ್ಟಮಠಾಧೀಶರ ಸಂಗಮವಾಯಿತು. ಪಲಿಮಾರು ಸ್ವಾಮಿಗಳ ಎರಡನೇ ಪರ್ಯಾಯ ಮಹೋತ್ಸವ ಆರಂಭಕ್ಕೆ ಮುನ್ನ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಕೆ ಮಾಡಲಾಯ್ತು.

ಪಲಿಮಾರು, ಕೃಷ್ಣಾಪುರ, ಶಿರೂರು, ಕಾಣಿಯೂರು, ಸೋದೆ, ಅದಮಾರುಕಿರಿಯ ಸ್ವಾಮೀಜಿ ಪರ್ಯಾಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ರಾಷ್ಟ್ರದ ವಿವಿಧೆಡೆಯಿಂದ ಬಂದ ಸಾಂಸ್ಕೃತಿಕ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಜೋಡುಕಟ್ಟೆಯಲ್ಲಿ ಕುಳಿತು ಅಷ್ಟಮಠಾಧೀಶರು ಮೆರವಣಿಗೆ ವೀಕ್ಷಣೆ ಮಾಡಿದರು. ಜೋಡು ಕಟ್ಟೆಯಿಂದ ರಾಜ ಮಾರ್ಗದಲ್ಲಿ ಮೆರವಣಿಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದರು.

ಮೂವರು ಟ್ಯಾಬ್ಲೋ ಪಲ್ಲಕ್ಕಿಯಲ್ಲಿ- ಇಬ್ಬರು ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಪರ್ಯಾಯ ಮಹೋತ್ಸವದ ಸ್ವಾಮೀಜಿಗಳ ಪಲ್ಲಕ್ಕಿ ಮೆರವಣಿಗೆ ಮೂರು ರೀತಿಯ ಸಂಪ್ರದಾಯಗಳಿಗೆ ಸಾಕ್ಷಿಯಾಯ್ತು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯೇರಿ ಮುಂದಿನ ಪರ್ಯಾಯ ಪೀಠಾಧಿಪತಿ ಪಲಿಮಾರುಶ್ರೀ ಬಂದರು. ಒಟ್ಟು ಮೂರು ವಿಧದ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳ ಮೆರವಣಿಗೆ ನಡೆಯಿತು.

ಟ್ಯಾಬ್ಲೋ ಪಲ್ಲಕ್ಕಿಯ ಸಲಹೆ ಎರಡು ವರ್ಷದ ಹಿಂದೆ ಪೇಜಾವರಶ್ರೀ ನೀಡಿದ್ದರು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯಿಟ್ಟು ಮಾನವರು ಹೊರುವ ಸಂಪ್ರದಾಯ ನಿಲ್ಲಿಸೋಣ ಅಂತ ಹೇಳಿ ಕಳೆದ ಪರ್ಯಾಯದಲ್ಲಿ ಬದಲಾವಣೆ ತಂದಿದ್ದರು. ಪೇಜಾವರ ಸಲಹೆಯನ್ನು ನಾಲ್ವರು ಸ್ವಾಮೀಜಿ ಒಪ್ಪಿದ್ದರು, ಇಬ್ಬರು ಒಪ್ಪಿಲ್ಲ. ಒಬ್ಬರು ಎರಡೂ ಬೇಡವೆಂದು ಪಲ್ಲಕ್ಕಿಯಲ್ಲಿ ದೇವರನ್ನು ಇಟ್ಟು, ತಾನು ಟ್ಯಾಬ್ಲೋದಲ್ಲಿ ಬಂದಿದ್ದಾರೆ.