LATEST NEWS
ಗಾಳ ಹಾಕಿ ಮೀನು ಹಿಡಿದರೆ 50 ಸಾವಿರ ರೂಪಾಯಿ ಬಹುಮಾನ
ಗಾಳ ಹಾಕಿ ಮೀನು ಹಿಡಿದರೆ 50 ಸಾವಿರ ರೂಪಾಯಿ ಬಹುಮಾನ
ಮಂಗಳೂರು ನವೆಂಬರ್ 21: ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಈಗ ಕ್ರೀಡೆಯ ಸ್ವರೂಪ ಪಡೆಯುತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ಭಾರಿ ಜನಪ್ರಿಯತೆ ಇರುವ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಈಗ ಕರಾವಳಿಗೂ ಕಾಲಿರಿಸಿದೆ.
ಗಾಳ ಹಾಕಿ ಮೀನು ಹೊಡೆಯುವ ಪ್ರಕ್ರಿಯೆಗೆ ಈಗ ಒಂದು ಕ್ರೀಡೆಯ ರೂಪ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಗಾಳ ಹಾಕುವ ಸ್ಪರ್ಧೆ “ಆ್ಯಂಗ್ಲಿಂಗ್ ಕಾರ್ನಿವಲ್ ” ಆಯೋಜಿಸಲಾಗುತ್ತಿದೆ.
ಡಿಸೆಂಬರ್ 24 ಹಾಗು 25 ರಂದು ಮಂಗಳೂರು ಹೊರವಲಯದ ಪಣಂಬೂರು ಕಡಲ ತೀರ ಮತ್ತು ಎನ್ಎಂಪಿಟಿ ಬ್ರೇಕ್ ವಾಟರ್ ವ್ಯಾಪ್ತಿಯಲ್ಲಿ ಈ ರಾಷ್ಟ್ರಮಟ್ಟದ ಗಾಳ ಹಾಕುವ ಸ್ಪರ್ಧೆ ಆ್ಯಂಗ್ಲಿಂಗ್ ಕಾರ್ನಿವಲ್ ನಡೆಯಲಿದೆ. ಗಿಫ್ಟೆಡ್ ಇಂಡಿಯಾ ಸಂಸ್ಥೆಯು ಎನ್ಎಂಪಿಟಿ ಮಂಗಳೂರು ಹಾಗೂ ಪಣಂಬೂರು ಬೀಚ್ ಸಹಯೋಗದಲ್ಲಿ ಈ ಗಾಳ ಹಾಕುವ ಉತ್ಸವವನ್ನು ಆಯೋಜನೆ ಮಾಡುತ್ತಿದೆ.
ಈ ಗಾಳ ಹಾಕುವ ಸ್ಪರ್ಧೆಯಲ್ಲಿ ಅಧಿಕ ತೂಕದ ಮೀನನ್ನು ಗಾಳದಲ್ಲಿ ಹಿಡಿದವರಿಗೆ ಹಾಗೂ ಅತಿ ಹೆಚ್ಚು ಸಂಖ್ಯೆಯ ಮೀನುಗಳನ್ನು ಹಿಡಿದವರಿಗೆ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ. ಅಧಿಕ ತೂಕದ ಮೀನು ಹಿಡಿದವರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ, ದ್ವಿತೀಯ 25 ಸಾವಿರ ರೂಪಾಯಿ ಹಾಗೂ ಅಧಿಕ ಸಂಖ್ಯೆಯ ಮೀನು ಹಿಡಿದವರಿಗೆ ಪ್ರಥಮ ಬಹುಮಾನ 10 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 5 ಸಾವಿರ ರೂಪಾಯಿ ನೀಡಲು ಆಯೋಜಕರು ನಿರ್ಧರಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಕೆಲವು ನಿಯಮಗಳನ್ನು ವಿಧಿಸಲಾಗಿದ್ದು, ಭಾಗವಹಿಸುವವರು ಉಪಯೋಗಿಸುವ ಗಾಳದಿಂದ ಮೀನಿಗೆ ಯಾವುದೇ ರೀತಿಯಲ್ಲಿ ಅಪಾಯವಾಗದಂತೆ ಎಚ್ಚರಿಕೆ ವಹಿಸುವ ನಿಯಮವಿದೆ . ಈ ಸ್ಪರ್ಧೆಯ ಸಂದರ್ಭದಲ್ಲಿ ಹಿಡಿದ ಮೀನಿನ ಪ್ರಮಾಣ ಹಾಗೂ ತೂಕ ಅಳೆದ ಬಳಿಕ ಅಷ್ಟೇ ಸುರಕ್ಷಿತವಾಗಿ ಆ ಮೀನುಗಳನ್ನು ಮತ್ತೆ ಸಮುದ್ರಕ್ಕೆ ಬಿಡುವ ಕಾರ್ಯ ನಡೆಯಲಿದೆ.
ಈ ಗಾಳ ಹಾಕುವ ಉತ್ಸವದಲ್ಲಿ ದೇಶದ ಇತರ ರಾಜ್ಯಗಳ ಸ್ಪರ್ಧಾಳುಗಳು ಸೇರಿದಂತೆ ವಿದೇಶಿ ಆ್ಯಂಗ್ಲರ್ ಗಳು ಕೂಡ ಭಾಗವಹಿಸಲಿದ್ದಾರೆ.