ಕುರಾನ್ ಗೆ ಅವಮಾನ ಆರೋಪ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ
ಮಂಗಳೂರು, ಅಕ್ಟೋಬರ್ 13: ಮುಸ್ಲೀಂ ಪವಿತ್ರ ಗ್ರಂಥ ಕುರಾನ್ ಗೆ ಅವಮಾನ ಮಾಡಿರುವ ಪೊಲೀಸ್ ಅಧಿಕಾರಿ ಮತ್ತು ಸಿಬಂದಿಗಳ ಅಮಾನತಿಗೆ ಆಗ್ರಹಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.
ಬಂಟ್ವಾಳ ಪೊಲೀಸರು ಮನೆಯ ತಪಾಸಣೆಯ ಸಂದರ್ಭದಲ್ಲಿ ಕುರ್‌ಆನ್‌ಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅನೇಕ ಧುರೀಣರು, ಹೋರಾಟಗಾರರು ಮಾತನಾಡಿ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.
ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಯಾಕೂಬ್ ಸಅದಿ ಮಾತನಾಡಿ ಗೋ ಹತ್ಯೆ ವಿಚಾರ, ಮುಸ್ಲಿಂ ಹುಡುಗಿಯರ ಸ್ಕಾರ್ಪ್ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಮರ ಭಾವನೆಗಳನ್ನು ಕೆರಳಿಸುವ ಪ್ರಯತ್ನಗಳು ಜಿಲ್ಲೆಯಲ್ಲಿ ನಡೆಯುತ್ತಲೇ ಇವೆ. ಆದರೆ ಈ ವಿಚಾರದಲ್ಲಿ ನ್ಯಾಯಕ್ಕಾಗಿ ಹೋರಾಟಗಳನ್ನು ಮಾಡಬೇಕಾದ ಸ್ಥಿತಿ ಬಂದಿರುವುದು ದುರದೃಷ್ಟಕರ.
ಅಡಳಿತ ವರ್ಗ, ಪೊಲೀಸ್ ಇಲಾಖೆಗಳಿಂದ ನ್ಯಾಯ ಸಿಗದ ಸಂದರ್ಭದಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ. ರಾಜ್ಯ ಸರಕಾರ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು :
ಪೊಲೀಸರಿಂದ ಕುರಾನ್ ಮೌಲ್ಯ ಚ್ಯುತಿ ಗೊಂಡ ಪ್ರಕರಣದಲ್ಲಿ ಒಕ್ಕೂಟ ಆಗ್ರಹಿಸಿದ ನ್ಯಾಯ ಸಿಗದೇ ಇದ್ದ ಪಕ್ಷದಲ್ಲಿ ಒಂದು ತಿಂಗಳಲ್ಲಿ ..
1. ಅಧ್ಯಕ್ಷರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ .
2. ಜಿಲ್ಲೆಯಾದಂತ ಮುಸ್ಲಿಮರಿಂದ ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಕರೆ.
3. ಮುಂದಿನ ವಿಧಾನ ಸಭೆ ಚುನಾವಣೆ ಯಲ್ಲಿ ಸಾಮೂಹಿಕವಾಗಿ (ನೋಟಾ)ಮತ ಚಲಾವಣೆಗೆ ಬಹಿರಂಗ ಪ್ರಚಾರ ಕೈಗೊಳ್ಳಲಾಗುದು.
ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಸೈಯದ್ ಸೈಫುಲ್ಲಾ ತಂಙಳ್ ಮಂಜೇಶ್ವರ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೇಲ್ ಕಂದಕ್, ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ. ಡೇಸಾ , ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಕಾರ್ಪೊರೇಟರ್ ಅಝೀಝ್ ಕುದ್ರೋಳಿ, ಆಲ್ ಇಂಡಿಯಾ ಇಮಾಂ ಕೌನ್ಸಿಲ್‌ನ ಝಫರ್ ಫೈಝಿ, ಪಿಎಫ್‌ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಹಮೀದ್ ಕುದ್ರೋಳಿ, ಹಮೀದ್ ಕಂದಕ್ ಮತ್ತಿತರರು ಉಪಸ್ಥಿತರಿದ್ದರು.