BANTWAL
ಕಲ್ಲಡ್ಕ-ಪುಣಚ ಶಾಲೆಗಳಿಗೆ ಅನುದಾನ ರದ್ದು ಗೊಳಿಸಿರುವುದರಲ್ಲಿ ನನ್ನ ಪಾತ್ರ ಇಲ್ಲ ; ಸಚಿವ ರೈ ಸ್ಪಷ್ಟನೆ
ಮಂಗಳೂರು,ಆಗಸ್ಟ್ 08 : ತಮ್ಮ ಶಾಲೆಗಳಿಗೆ ಅನುದಾನ ರದ್ದು ಮಾಡುವಲ್ಲಿ ನನ್ನ ಪಾತ್ರವಿದೆ ಎಂದು ಡಾ. ಕಲ್ಲಡ್ಕ ಪ್ರಭಾಕರ ಭಟ್ ಆರೋಪ ನಿರಾಧಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಿಂದ ಖಾಸಗಿ ಶಾಲೆಗಳಿಗೆ ಅನುದಾನ ಕೊಡುವ ವ್ಯವಸ್ಥೆ ಇಲ್ಲ. ಹಾಗಿದ್ದರೂ ಈ ಎರಡೂ ಶಾಲೆಗಳಿಗೆ ಅನುದಾನ ನೀಡಲಾಗಿದೆ. 2007 ರಲ್ಲಿ ಜೆಡಿಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದಿಂದ ಅಧಿಕಾರ ದುರುಪಯೋಗ ಪಡಿಸಿಕೊಂಡು ಶಾಲೆಗಳಿಗೆ ಅನುದಾನ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಅವಕಾಶ ವಂಚಿತವಾದ ಹಲವಾರು ಶಾಲೆಗಳಿವೆ, ಡಾ. ಪ್ರಭಾಕರ್ ಭಟ್ ನಡೆಸುತ್ತಿರುವ ಶ್ರೀ ರಾಮವಿದ್ಯಾ ಕೇಂದ್ರಕ್ಕೆ ಸಂಘ ಪರಿವಾರದ ಬೆಂಬಲವಿದೆ ಎಂದ ಅವರು 5 ತಿಂಗಳ ಹಿಂದೆಯೇ ಮುಖ್ಯಮಂತ್ರಿಯವರು ಮುಜರಾಯಿ ಇಲಾಖೆಗೆ ಅನುದಾನ ಕಡಿತಗೊಳಿಸುವಂತೆ ಪತ್ರ ಬರೆದಿದ್ದರು. ಅದು ಈಗ ಕಾರ್ಯರೂಪಕ್ಕೆ ಬಂದಿದೆ ಅಷ್ಟೆ ಎಂದು ಹೇಳಿದ ಅವರು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ರವರ ಶ್ರೀರಾಮ ವಿದ್ಯಾಕೇಂದ್ರ ಮತ್ತು ಬಂಟ್ವಾಳದ ಪುಣಚ ಶ್ರೀದೇವಿ ವಿದ್ಯಾ ಕೇಂದ್ರ ಶಾಲೆಗಳಿಗೆ ಅನುದಾನ ರದ್ದು ಗೊಳಿಸಿರುವುದರಲ್ಲಿ ನನ್ನ ಪಾತ್ರ ಇಲ್ಲ ಎಂದು ರಮಾನಾಥ ರೈ ಹೇಳಿದರು.