Connect with us

    DAKSHINA KANNADA

    ಪುತ್ತೂರಲ್ಲೊಂದು ಅಲೆದಾಟದ ಕಾಲೇಜು, ತರಗತಿಯಿಂದ ತರಗತಿಗೆ ಇಲ್ಲಿದೆ 500 ಮೀಟರ್ ರೇಂಜು…..

    ಪುತ್ತೂರು, ಅಗಸ್ಚ್ 8: ಒಂದು ಸಂಸ್ಥೆಯನ್ನು ಆರಂಭಿಸುವ ಮೊದಲು ಸಂಸ್ಥೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡುವುದು ಸಾಮಾನ್ಯವಾಗಿ ಎಲ್ಲರೂ ನಡೆಸಿಕೊಂಡು ಬಂದಿರುವ ನೀತಿ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇದಕ್ಕೆ ವ್ಯತಿರಿಕ್ತವಾದ ವ್ಯವಸ್ಥೆಯೊಂದು ನಡೆಯುತ್ತಿದೆ. ಪುತ್ತೂರಿನಲ್ಲಿ ಮಹಿಳಾ ಕಾಲೇಜು ಬೇಕೆಂದು ಪುತ್ತೂರು ಶಾಸಕಿಯವರು ಕಾಲೇಜನ್ನು ಮಂಜೂರು ಮಾಡಿಸಿದರೂ, ಕಾಲೇಜು ಎಲ್ಲಿ ನಡೆಯಬೇಕು ಎನ್ನುವುದನ್ನು ಯೋಚಿಸದ ಕಾರಣ ಇದೀಗ ಮಂಜೂರುಗೊಂಡ ಮಹಿಳಾ ಕಾಲೇಜು ಅಲೆಮಾರಿ ಕಾಲೇಜಾಗಿ ಬದಲಾಗಿದೆ.

    ಬೆಳಿಗ್ಗೆ ,ಮಧ್ಯಾಹ್ನ, ಸಂಜೆ ಹೀಗೆ ಯಾವ ಹೊತ್ತಲ್ಲೇ ಆಗಲಿ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುವುದು ಈ ಕಾಲೇಜಿನ ವಿದ್ಯಾರ್ಥಿನಿಯರಿಗೀಗ ಅಭ್ಯಾಸವಾಗಿ ಬಿಟ್ಟಿದೆ. ಈ ವಿದ್ಯಾರ್ಥಿನಿಯರು ತರಗತಿಯ ಕೊಠಡಿಗಾಗಿ ಪ್ರತಿದಿನವೂ ಅತ್ತಿಂದಿತ್ತ  ಅಲೆದಾಡುತ್ತಲೇ ಇರುತ್ತಾರೆ. ಪುತ್ತೂರಿನಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಸ್ಥಳಾಂತರಗೊಂಡ ಪುತ್ತೂರು ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಪ್ರತಿನಿತ್ಯದ ಗೋಳಿದು. ಪುತ್ತೂರಿನಲ್ಲಿ ಮಹಿಳಾ ಕಾಲೇಜು ಆರಂಭಿಸಬೇಕೆಂಬ ಕಾರಣದಿಂದ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಸರಕಾರದಿಂದ ಕಾಲೇಜನ್ನು ಮಂಜೂರು ಕೂಡಾ ಮಾಡಿಸಿದ್ದರು. ಕಾಲೇಜು ಮಂಜೂರುಗೊಂಡ ಆರಂಭದಲ್ಲಿ ಪುತ್ತೂರು ನಗರದ ನೆಲ್ಲಿಕಟ್ಟೆ ಎಂಬಲ್ಲಿದ್ದ ಸರಕಾರಿ ಶಾಲೆಯಲ್ಲಿಯೇ ತರಗತಿಯನ್ನು ನಡೆಸಲಾಯಿತು. ಬಳಿಕ ಅಲ್ಲಿ ಕೊಠಡಿಗಳ ಸಮಸ್ಯೆ ಎದುರಾದಾಗ ಹಳೆಯ ತಾಲೂಕು ಕಛೇರಿಯಲ್ಲೇ ಕಾಲೇಜನ್ನು ನಡೆಸಲು ತೀರ್ಮಾನಿಸಲಾಯಿತು. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾದಂತೆ ತಾಲೂಕು ಕಛೇರಿಯ ಕಾಲೇಜಿನಲ್ಲೂ ಕೊಠಡಿಗಳ ಸಮಸ್ಯೆ ಎದುರಾದಾಗ ಹೆಚ್ಚುವರಿ ಕೊಠಡಿಗಾಗಿ ಸದ್ಯ ಇರುವ ಕಾಲೇಜಿನಿಂದ 500 ಮೀಟರ್ ದೂರದ ಪುರಸಭೆಯ ಹಳೆಯ ಕಟ್ಟಡದಲ್ಲೂ ತರಗತಿಯನ್ನು ಆರಂಭಿಸಲಾಯಿತು. ಈ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಕಾಲೇಜಿನ ವಿದ್ಯಾರ್ಥಿನಿಯರು ಒಂದು ತರಗತಿಗೆ ತಾಲೂಕು ಕಛೇರಿ ಕಟ್ಟಡಕ್ಕೆ ಅಲೆದರೆ, ಇನ್ನೊಂದು ತರಗತಿಗಾಗಿ ಪುರಸಭೆಯ ಹಳೆಯ ಕಟ್ಟಡಕ್ಕೆ ಅಲೆಯುತ್ತಿದ್ದಾರೆ.
    ಕಾಲೇಜು ಮಂಜೂರು ಮಾಡುವ ಮೊದಲು ಕಾಲೇಜಿಗೆ ಬೇಕಾದಂತಹ ವ್ಯವಸ್ಥೆಯನ್ನು ಮಾಡಿಕೊಳ್ಳದ ಕಾರಣ ಇದೀಗ ಈ ಸಮಸ್ಯೆ ಎದುರಾಗಿದೆ. ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಕುಳಿತುಕೊಳ್ಳಲು ಸರಿಯಾದ ಕೊಠಡಿಯಿಲ್ಲ, ವಿದ್ಯಾರ್ಥಿನಿಯರಿಗೆ ಬೇಕಾದಷ್ಟು ತರಗತಿ ಕೊಠಡಿಗಳಿಲ್ಲ, ಕ್ರೀಡಾ ಚಟುವಟಿಕೆಗಳಿಗೆ ಬೇಕಾದ ಆಟದ ಮೈದಾನವಿಲ್ಲ. ಹೀಗೇ ಹಲವು ಇಲ್ಲಗಳ ಮಧ್ಯೆ ಈ ವಿದ್ಯಾರ್ಥಿನಿಯರು ತನ್ನ ಶಿಕ್ಷಣವನ್ನು ಮುಂದುವರಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ತರಗತಿಗಾಗಿ ಅಲೆಯುವ ವಿದ್ಯಾರ್ಥಿನಿಯರಿಗೆ ಇದೀಗ ಹಿಂಸೆಯಾಗತೊಡಗಿದೆ. ಬೇಸಿಗೆ ಕಾಲದಲ್ಲಿ ಹೇಗಾದರೂ ನಿಭಾಯಿಸಿಕೊಳ್ಳುವ ವಿದ್ಯಾರ್ಥಿನಿಯರು ಇದೀಗ ಮಳೆಗಾಲದಲ್ಲಿ ಕೆಲವು ಸಮಯಗಳಲ್ಲಿ ತೊಯ್ದುಕೊಂಡೇ ತರಗತಿಗೆ ಹಾಜರಾಗಬೇಕಾದ ಪರಿಸ್ಥಿತಿ ಇಲ್ಲಿದೆ. ತನ್ನ ಪ್ರತಿಷ್ಟೆ ಹಾಗೂ ರಾಜಕೀಯ ಕಾರಣಕ್ಕೋಸ್ಕರ ಜನಪ್ರತಿನಿಧಿಗಳು ತೆಗೆದುಕೊಳ್ಳುವ ಇಂಥಹ ನಿರ್ಧಾರಗಳಿಂದಾಗಿ ವಿದ್ಯಾರ್ಥಿನಿಯರು ಇಂತಹ ಸಂಕಷ್ಟ ಅನುಭವಿಸಬೇಕಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply