Connect with us

    LATEST NEWS

    ಅಮರ್ ಜವಾನ್ ಜ್ಯೋತಿ ಸ್ಮಾರಕ :ಶೃಂಗೇರಿ ಮಠದ ಯತೀವರ್ಯರ ನೇತೃತ್ವದಲ್ಲಿ ಶಾಸ್ತ್ರೋಕ್ತ ಪ್ರಕ್ರೀಯೆಗಳು

    ಪುತ್ತೂರು, ಅಗಸ್ಟ್ 15 : ದಕ್ಷಿಣ ಕನ್ನಡ ಜಿಲ್ಲೆಯ  ಪುತ್ತೂರಿನಲ್ಲಿ ನಿರ್ಮಾಣಗೊಂಡ ದೇಶದ ಮೂರನೇ ಅಮರ್ ಜವಾನ್ ಜ್ಯೋತಿ ಸ್ಮಾರಕದ ಉದ್ಘಾಟನೆ ಇಂದು ನೆರವೇರಿತು. ಶೃಂಗೇರಿ ಮಠದ ಯತೀವರ್ಯರ ನೇತೃತ್ವದಲ್ಲಿ ಸ್ಮಾರಕಕ್ಕೆ ಕಲಶವನ್ನು ಇಡುವ ಪ್ರಕ್ರಿಯೆಯೂ ಶಾಸ್ತ್ರೋಕ್ತವಾಗಿ ನಡೆಯಿತು.

    ಮಾಜಿ ಸೈನಿಕ ಬ್ರಿಗೇಡಿಯರ್ ಎನ್.ಕೆ. ಹೆಗ್ಡೆ ಈ ಸ್ಮಾರಕದಲ್ಲಿ ವರ್ಷಪೂರ್ತಿ ನಿರಂತರವಾಗಿ ಉರಿಯುವಂತಹ ಅಮರ ಜ್ಯೋತಿಯನ್ನು ಬೆಳಗುವ ಮೂಲಕ ಚಾಲನೆ ನೀಡಿದರು. ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ, ಸಹಾಯಕ ಕಮಿಷನರ್ ರಘುನಂದನ್ ಮೂರ್ತಿ, ಮಾಜಿ ಸೈನಿಕರು ಸೇರಿದಂತೆ ಹಲವು ಗಣ್ಯರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಅಮರ್ ಜವಾನ್ ಜ್ಯೋತಿ

    ಪುತ್ತೂರಿನಲ್ಲಿ ಸಿದ್ಧಗೊಂಡಿರುವ ಈ ಅಮರ್ ಜವಾನ್ ಜ್ಯೋತಿ ದೇಶದ ಮೂರನೇ ಅಮರ್ ಜವಾನ್ ಜ್ಯೋತಿ ಸ್ಮಾರಕವಾಗಿಯೂ ಹೆಸರು ಪಡೆದಿದೆ. ವರ್ಷದ 365 ದಿನವೂ 24 ಗಂಟೆಗಳ ಕಾಲ ಸದಾ ಕಾಲ ಉರಿಯಲಿರುವ ಸ್ಮಾರಕದ ಈ ಜ್ಯೋತಿ ಯೋಧರ ದೇಗುಲವೂ ಆಗಲಿದೆ. ಯಾವ ರೀತಿಯಲ್ಲಿ ದೇವಸ್ಥಾನದ ಮೇಲೆ ಕಳಶವಿರುತ್ತದೋ ಅದೇ ಪ್ರಕಾರ ಈ ಸ್ಮಾರಕದಲ್ಲಿ ಕಳಶವನ್ನು ಇಡುವ ಮೂಲಕ ಇದಕ್ಕೆ ಸ್ಮಾರಕಕ್ಕಿಂತ ದೇಗುಲದ ಸ್ಪರ್ಷವನ್ನು ನೀಡಿರುವುದು ವಿಶೇಷವಾಗಿದೆ.

    ಪುತ್ತೂರಿನ ಅಂಬಿಕಾ ವಿದ್ಯಾಸಮೂಹ ಸಂಸ್ಥೆ ತನ್ನ ದೇಶಭಕ್ತಿಯ ದ್ಯೋತಕವಾಗಿ ಈ ಸ್ಮಾರಕವನ್ನು ನಿರ್ಮಿಸಿದ್ದು, ಪುತ್ತೂರು ನಗರಸಭೆಯ ಇದಕ್ಕೆ ಬೇಕಾದ ಜಾಗದ ವ್ಯವಸ್ಥೆಯನ್ನು ಕಲ್ಪಿಸಿದೆ. ಇದು ಕಪ್ಪು ಅಮೃತಶಿಲೆಯ ಸ್ಮಾರಕ ಸಮಾಧಿಯಾಗಿದ್ದು, ಅದರ ಕೊರಳಿನ ಭಾಗದಲ್ಲಿ ಒಂದು ಬಂದೂಕನ್ನು ಇರಿಸಿ ಯೋಧನ ಶಿರಸ್ತ್ರಾಣವೊಂದನ್ನು ಅದರ ನೆತ್ತಿಗೇರಿಸಲಾಗಿದೆ. ಸ್ಮಾರಕ ಸಮಾಧಿಯ ಪ್ರತಿ ಮುಖವೂ ಬಂಗಾರದಲ್ಲಿ ಕೆತ್ತಲಾಗಿರುವ ‘ಅಮರ್ ಜವಾನ್’ ಎಂಬ ಪದಗಳನ್ನು ಹೊಂದಿದೆ.

    ಯೋಧರಿಗೆ ಸಂಬಂದಪಟ್ಟ ಎಲ್ಲಾ ಕಾರ್ಯಕ್ರಮಗಳು ಇನ್ನು ಮುಂದೆ ಇದೇ ಸ್ಥಳದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಿಸಿದ ಯೋಧರ ಹುತಾತ್ಮರಾದರೆ ಅವರ ಪ್ರಾರ್ಥಿವ ಶರೀರವನ್ನು ಇಲ್ಲಿಗೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡುವಂತ ವ್ಯವಸ್ಥೆಯ ಬಗ್ಗೆಯೂ ಇದೀಗ ಜಿಲ್ಲಾಡಳಿತದ ಜೊತೆಗೆ ಮಾತುಕತೆಗಳೂ ನಡೆಯುತ್ತಿದೆ.

    ದೇಶಭಕ್ತಿಯನ್ನು ತನ್ನ ಪ್ರಾಣ ಪಣಕ್ಕಿಡುವ ಮೂಲಕ ತೋರ್ಪಡಿಸುವ ಧೀರ ಯೋಧನಿಗೆ ಪ್ರತಿಯೊಬ್ಬ ನಾಗರಿಕನೂ ತಲೆಬಾಗಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಪುತ್ತೂರಿನ ಈ ಅಮರ್ ಜವಾನ್ ಜ್ಯೋತಿ ಸಾರ್ವಜನಿಕರಿಗೆ ಯೋಧರ ಬಗ್ಗೆ ಶ್ರದ್ಧೆ ಮೂಡಿಸುವ ಕೇಂದ್ರವಾಗಿಯೂ ಬದಲಾಗಲಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *