DAKSHINA KANNADA
ಬಾಳು ಬೆಳಗಿದ ಪಿಕ್ ಅಪ್ ಜೊತೆ ಮದುವೆ ಗಂಡಿನ ಗೆಟ್ ಅಪ್

ಬಾಳು ಬೆಳಗಿದ ಪಿಕ್ ಅಪ್ ಜೊತೆ ಮದುವೆ ಗಂಡಿನ ಗೆಟ್ ಅಪ್
ಪುತ್ತೂರು,ಡಿಸೆಂಬರ್ 5: ಜೀವನದಲ್ಲಿ ಕಷ್ಟಪಟ್ಟು ಮುಂದೆ ಬಂದವರು ಹಿಂದೆ ತಮ್ಮ ಜೀವನದ ಕಷ್ಟಗಳ ಕಾಲವನ್ನು ನೆನೆಸೋದು ವಿರಳವೇ.
ಒಮ್ಮೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ ಮೇಲೆ ತಾನು ಉನ್ನತ ಸ್ಥಾನಕ್ಕೇರಲು ಸಹಕರಿಸಿದವರನ್ನು ಮರೆಯುವವರೇ ಹೆಚ್ಚು.

ಕಷ್ಟದ ಕಾಲದಲ್ಲಿ ತನ್ನ ಏಳಿಗೆಗೆ ಕಾರಣವಾದ ವಾಹನವನ್ನು ತನ್ನ ಜೀವನದ ಎವರ್ ಗ್ರೀನ್ ಮೂಮೆಂಟ್ ಗಳಲ್ಲಿ ಒಂದಾದ ಮದುವೆಯಲ್ಲಿ ನೆನಪಿಸಿಕೊಂಡ ಯುವಕನ ಕಥೆಯಿದು.
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಟ್ಟೆ ಬರೆ ನಿವಾಸಿ ಸುರೇಶ್ ಈ ಕಥೆಯ ಕಥಾ ನಾಯಕ.
ತನ್ನ ಜೀವನ ನಿರ್ವಹಣೆಗಾಗಿ ಸುರೇಶ್ ಪಿಕ್ ಅಪ್ ವಾಹನವೊಂದರಲ್ಲಿ ಏಳೆಂಟು ವರ್ಷಗಳ ಹಿಂದೆ ಚಾಲಕನಾಗಿ ಸೇರಿಕೊಂಡಿದ್ದ.
ಪಿಕ್ ಅಪ್ ವಾಹನದಲ್ಲೇ ದುಡಿದು ಬಳಿಕ ಎರಡು ವರ್ಷಗಳ ಹಿಂದೆ ಸ್ವಂತ ಪಿಕ್ಅಪ್ ಗಾಡಿಯನ್ನೂ ಪರ್ಚೇಸ್ ಮಾಡಿಕೊಂಡರು.
ಇದೀಗ ತನ್ನ ಸ್ವಂತ ಪಿಕ್ ಅಪ್ ವಾಹನದಲ್ಲಿ ದುಡಿದು ಅದೇ ಹಣದಲ್ಲಿ ಆಸ್ತಿ-ಪಾಸ್ತಿ ವೃದ್ಧಿಸಿಕೊಂಡಿದ್ದರು.
ಈ ನಡುವೆ ಸುರೇಶ್ ಡಿಸೆಂಬರ್ 4 ರಂದು ವೈಷ್ಣವಿಯೊಂದಿಗೆ ಸಪ್ತಪದಿಯನ್ನೂ ತುಳಿದಿದ್ದಾರೆ. ಇಲ್ಲಿ ಸುರೇಶ್ ನ ಮದುವೆ ಮುಖ್ಯವಲ್ಲ.
ಮದುವೆಯಲ್ಲಿ ಆತ ಮದುವೆ ದಿಬ್ಬಣದಲ್ಲಿ ಬಳಸಿಕೊಂಡ ವಾಹನ ಮಾತ್ರ ಎಲ್ಲರ ಗಮನಸೆಳೆದಿತ್ತು.
ಹೌದು ತನ್ನ ಬಾಳು ಬೆಳಗಿದ ವಾಹನವನ್ನೇ ಮದುವೆ ದಿಬ್ಬಣ ವಾಹನವಾಗಿ ಆಯ್ದುಕೊಂಡಿದ್ದ ಸುರೇಶ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಅಂದಹಾಗೆ ಸುರೇಶ್ ಗೆ ಪಿಕ್ ಅಪ್ ವಾಹನದಲ್ಲೇ ಮದುಮಗಳೊಂದಿಗೆ ಸಾಗಬೇಕಾದ ಅನಿವಾರ್ಯತೆಯಂತು ಇರಲೇ ಇಲ್ಲ.
ಯಾಕೆಂದರೆ ಸುರೇಶ್ ಪಿಕ್ ಅಪ್ ವಾಹನದ ಜೊತೆಗೆ ತನ್ನ ಇತರ ವ್ಯವಹಾರಕ್ಕೆಂದೇ ಇನ್ನೊಂದು ವಾಹನವನ್ನೂ ಹೊಂದಿದ್ದರು.
ಆದರೆ ಬಾಳಿನ ದಾರಿ ದೀಪವಾದ ಪಿಕ್ ಅಪ್ ವಾಹನದ ಮೇಲಿನ ವ್ಯಾಮೋಹ ಸುರೇಶ್ ಗೆ ಈ ರೀತಿಯ ನಿರ್ಧಾರಕ್ಕೆ ಬರಲು ಕಾರಣವಾಗಿತ್ತು.
ಐಶ್ವರ್ಯ ಬಂದಾಗ ನೆರವಾದವರನ್ನು ಮರೆಯುವ ಜನರಿರುವ ಈ ದಿನಗಳಲ್ಲಿ ಸುರೇಶ್ ನ ಪಿಕ್ ಅಪ್ ಕಾಳಜಿ ಮೆಚ್ಚುವಂತದ್ದೇ..