LATEST NEWS
ಶಾಸಕ ರಘುಪತಿ ಭಟ್ ಜೊತೆಗೆ ತೆರಳಿ ಮತ ಯಾಚಿಸುತ್ತೇನೆ – ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ

ಉಡುಪಿ ಎಪ್ರಿಲ್ 12: ಸಾಮಾನ್ಯ ಕಾರ್ಯಕರ್ತನನ್ನು ಬಿಜೆಪಿ ಪಕ್ಷ ಗುರುತಿಸಿರುವುದಕ್ಕೆ ನಾನೇ ಉದಾಹರಣೆ. ಪಕ್ಷ ಕೊಟ್ಟ ಸಲಹೆ ಸೂಚನೆಯನ್ನು ಪಾಲಿಸುತ್ತೇನೆ. ಕರಾವಳಿ ಭಾಗದ ಉದ್ದಗಲ ಓಡಾಡುತ್ತೇನೆ ಎಂದು ಉಡುಪಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಎ. ಸುವರ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ ರಘುಪತಿ ಭಟ್ ಮಾರ್ಗದರ್ಶನ, ಸಹಕಾರದಲ್ಲಿ ಚುನಾವಣೆಯನ್ನು ಎದುರಿಸುತ್ತೇನೆ. ಶಾಸಕರ ಜೊತೆ ಜನರ ಬಳಿ ಹೋಗಿ ಮತ ಪ್ರಚಾರ ಮಾಡುತ್ತೇನೆ. ರಾಷ್ಟ್ರೀಯ ಚಿಂತನೆ ಹಿಂದೂ ಸಮಾಜದ ರಕ್ಷಣೆ ನನ್ನ ಧ್ಯೇಯ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತೇನೆ. ನಾನು ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಪಕ್ಷದ ಚಟುವಟಿಕೆಗಳನ್ನು ಬಹಳ ಪ್ರಾಮಾಣಿಕವಾಗಿ ನಾನು ಮಾಡಿದ್ದೇನೆ ಎಂದರು.

ಶಾಸಕ ರಘುಪತಿ ಭಟ್ ಅವರನ್ನು ಇವತ್ತು ಭೇಟಿಯಾಗುತ್ತೇನೆ. ಕಳೆದ ಬಹಳ ವರ್ಷಗಳಿಂದ ಅವರ ಜತೆ ಕೆಲಸ ಮಾಡಿದ್ದೇನೆ. ಚುನಾವಣಾ ಪ್ರಚಾರಕ್ಕೆ ಅವರ ಜತೆಗೆ ಹೋಗುವೆ ಎಂದು ಯಶ್‌ಪಾಲ್ ಎ ಸುವರ್ಣ ಹೇಳಿದರು.