FILM
ಕಳೆದ ವರ್ಷದ ಘಟನೆ – ಈ ಬಾರಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಯಶ್ ಸಂದೇಶ
ಬೆಂಗಳೂರು ಡಿಸೆಂಬರ್ 30: ಕಳೆದ ವರ್ಷ ಯಶ್ ಹುಟ್ಟುಹಬ್ಬದ ಸಂದರ್ಭ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಸಾವನಪ್ಪಿದ್ದರು. ಈ ಹಿನ್ನಲೆ ಈ ಬಾರಿ ಅಭಿಮಾನಿಗಳಿಗೆ ಯಶ್ ಖಡಕ್ ಸಂದೇಶ ನೀಡಿದ್ದು, ಯಾವುದೇ ರೀತಿ ಆಡಂಬರ ಮಾಡಬಾರದೆಂದು ಹೇಳಿದ್ದಾರೆ.
ಯಶ್ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಇರುವಾಗಲೇ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಆಡಂಬರ ಇಲ್ಲದೇ ತಮ್ಮ ಹುಟ್ಟುಹಬ್ಬವನ್ನು ಆಚರಿಸುವಂತೆ ಅಭಿಮಾನಿಗಳನ್ನು ಯಶ್ ಕೇಳಿಕೊಂಡಿದ್ದಾರೆ.
ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಕಾರಣ ತಾವು ಬೆಂಗಳೂರಿನಲ್ಲಿ ಇರುವುದಿಲ್ಲ. ಹೀಗಾಗಿ ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿ ಇರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫ್ಲೆಕ್ಸ್, ಬ್ಯಾನರ್ಗಳ ಯಾವುದೇ ಆಡಂಬರ ಮಾಡದೇ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೇ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ ಎಂದು ಯಶ್ ಪೋಸ್ಟ್ ಮಾಡಿದ್ದಾರೆ.
2024ರಲ್ಲಿ ಯಶ್ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ನೆಚ್ಚಿನ ನಟನ ಫ್ಲೆಕ್ಸ್ ನಿಲ್ಲಿಸುವಾಗ ಮೂವರು ಅಭಿಮಾನಿಗಳು ಕರೆಂಟ್ ಶಾಕ್ ನಿಂದ ಮೃತಪಟ್ಟಿದ್ದರು. ಆ ಘಟನೆಯಿಂದ ಯಶ್ ಮನಸ್ಸಿಗೆ ತೀವ್ರ ನೋವಾಗಿತ್ತು. ಆ ರೀತಿಯ ಘಟನೆಗಳು ಮತ್ತೆ ನಡೆಯಬಾರದು ಎಂಬ ಕಾಳಜಿಯಿಂದ ಯಶ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.