Connect with us

BANTWAL

ತೆಂಕುತಿಟ್ಟಿನ ಯಕ್ಷಗಾನದ ಗಾನ ಗಂಧರ್ವ ಭಾಗವತ ಪದ್ಯಾಣ ಗಣಪತಿ ಭಟ್‌ ವಿಧಿವಶ

ಬಂಟ್ವಾಳ ಅಕ್ಟೋಬರ್ 12: ತೆಂಕುತಿಟ್ಟಿನ ಅಗ್ರಪಂಕ್ತಿಯ ಭಾಗವತ ಪದ್ಯಾಣ ಗಣಪತಿ ಭಟ್‌ (66) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 7.30 ಕ್ಕೆ ಹೃದಯಘಾತದಿಂದ ನಿಧನರಾಗಿದ್ದಾರೆ.
ಕಳೆದ 50 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಮಿಂಚಿದ್ದ ಪದ್ಯಾಣರು ತೆಂಕಿನಲ್ಲಿ ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿದ ಮೇರು ಕಲಾವಿದರಾಗಿದ್ದರು.


ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಜನನಿದ್ದ ಗಣಪತಿ ಭಟ್ ಆ ಕಾಲದಲ್ಲಿ ಭಾಗವತಿಕೆಗೆ ಹೆಸರಾಗಿದ್ದ ಅಜ್ಜ ಪುಟ್ಟು ನಾರಾಯಣ ಭಟ್ಟರಿಂದಲೇ ಭಾಗವತಿಕೆಯ ಪ್ರಾಥಮಿಕ ಪಾಠ ಅಭ್ಯಾಸಿಸಿದ್ದರು
ತಮ್ಮ 16ರ ಹರೆಯದಲ್ಲೇ ಚೌಡೇಶ್ವರೀ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಮುಂದಿನ ವರ್ಷ ಕುಂಡಾವು ಮೇಳ ಪ್ರವೇಶಿಸಿ ಅಲ್ಲಿ 2 ವರ್ಷ ಸೇವೆ ಸಲ್ಲಿಸಿದರು. ಮುಂದೆ ಕಸ್ತೂರಿ ವರದರಾಯ ಪೈ ಯಾಜಮಾನ್ಯದ ಸುರತ್ಕಲ್‌ ಮೇಳ ಸೇರಿದ ಪದ್ಯಾಣ ತನ್ನ ವ್ಯವಸಾಯ ಜೀವನದುದ್ದಕ್ಕೂ ಸಿದ್ಧಿ- ಪ್ರಸಿದ್ಧಿ ಸಹಿತ ಅಪಾರ ಯಶಸ್ಸು ಪಡೆದಿದ್ದರು.

40 ವರ್ಷಗಳ ಸುದೀರ್ಘ ಕಾಲ ಭಾಗವತರಾಗಿ ಕುಂಡಾವು, ಚೌಡೇಶ್ವರೀ, ಸುರತ್ಕಲ್‌, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳದಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು.