LATEST NEWS
ಉಡುಪಿ – ಸಾಲ ವಿಚಾರಕ್ಕೆ ಯಕ್ಷಗಾನ ಕಲಾವಿದನ ಮೇಲೆ ಬಾರುಕೋಲಿನಿಂದ ಹಲ್ಲೆ
ಪಡುಬಿದ್ರಿ ಜನವರಿ 24: ಸಾಲದ ವಿಚಾರಕ್ಕೆ ಯಕ್ಷಗಾನ ಕಲಾವಿದನ ಮೇಲೆ ಮೂವರು ಕಂಬಳದ ಕೋಣಗಳ ಹೊಡೆಯಲು ಬಳಸುವ ಬಾರುಕೋಲಿನ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ ನಡ್ಸಾಲು ಗ್ರಾಮದ ನಿತಿನ್ ಆಚಾರ್ಯ(31) ಹಲ್ಲೆಗೆ ಒಳಗಾಗಿರುವ ಕಲಾವಿದ. ಸಚಿನ್ ಅಮೀನ್ ಉದ್ಯಾವರ, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಶಿಯರ್ ಹಲ್ಲೆ ಮಾಡಿದವರು.
ಸಸಿಹಿತ್ಲು ಶ್ರೀಭಗವತಿ ಯಕ್ಣಗಾನ ಮೇಳದ ಕಲಾವಿದರಾಗಿರುವ ಇವರು, ಅವರ ಸ್ನೇಹಿತ ಪಾವಂಜೆ ಮೇಳದ ಕಲಾವಿದ ಸಚಿನ್‌ನಿಂದ 2020ರಲ್ಲಿ ಬಡ್ಡಿಗೆ ಸಾಲ ಪಡೆದುಕೊಂಡು ಅಸಲು ಹಾಗೂ ಬಡ್ಡಿಕಟ್ಟುತ್ತಿದ್ದರು. ಪಡೆದ ಸಾಲ ಹಿಂದಿರುಗಿಸಿಲ್ಲ ಎನ್ನುವ ಕಾರಣಕ್ಕೆ ನಿತಿನ್‌ನನ್ನು ಪಾವಂಜೆ ಮೇಳದ ಯಕ್ಷ ಕಲಾವಿದನಾಗಿದ್ದ ಆರೋಪಿ ಸಚಿನ್, ಆತನ ತಂದೆ ಕುಶಾಲಣ್ಣ ಹಾಗೂ ಇನ್ನೋರ್ವ ಫೈನಾನ್ಶಿಯರ್ ಸೇರಿ ಉದ್ಯಾವರದ ಮನೆಯೊಂದರಲ್ಲಿ ಜನವರಿ 21ರಂದು ಕಂಬಳದ ಕೋಣಗಳ ಬಾರುಕೋಲಿನ ಮೂಲಕ ಸತತವಾಗಿ ಹಲ್ಲೆಗೈದಿದ್ದರು.
ಬೆತ್ತದಿಂದ ನಿತಿನ್ ಅವರ ಬೆನ್ನಿಗೆ, ತಲೆಗೆ, ಕಾಲಿಗೆ ಹೊಡೆದಿದ್ದಾರೆ. ಕಾಲಿನಿಂದ ತುಳಿದು ಕೈಯಿಂದ ಕೆನ್ನೆಗೆ ಹೊಡೆದು ಖಾಲಿ ಬಾಂಡ್ ಪೇಪರ್‌ಗೆ ಬಲಾತ್ಕಾರವಾಗಿ ಸಹಿ ಪಡೆದುಕೊಂಡಿದ್ದಾರೆ. ಸಂಜೆ ವಾಪಸು ಪಡುಬಿದ್ರಿಗೆ ಆರೋಪಿಗಳೇ ಕಳುಹಿಸಿಕೊಟ್ಟಿದ್ದಾರೆ. ಜನವರಿ 21ರ ರಾತ್ರಿ ವೇಳೆ ಪುತ್ತೂರಿನಲ್ಲಿ ನಡೆದ ಯಕ್ಷಗಾನಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿದ್ದ ನಿತಿನ್, ಜನವರಿ 22ರಂದು ಬೆಳಿಗ್ಗೆ ನೋವು ಜಾಸ್ತಿಯಾದ್ದರಿಂದ ಪಡುಬಿದ್ರೆ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.