UDUPI
ಅನಾಥವಾಗಿ ದೊರೆತ ನೀರು ಹಾವಿನ ಮೊಟ್ಟೆಗಳಿಂದ ಹೊರ ಬಂದ 17 ಮರಿಗಳು
ಅನಾಥವಾಗಿ ದೊರೆತ ನೀರು ಹಾವಿನ ಮೊಟ್ಟೆಗಳಿಂದ ಹೊರ ಬಂದ 17 ಮರಿಗಳು
ಉಡುಪಿ ಫೆಬ್ರವರಿ 23: ಅನಾಥವಾಗಿ ದೊರೆತ ನೀರು ಹಾವಿನ ಮೊಟ್ಟೆಗೆ ಕಾವು ನೀಡಿದ ಪರಿಣಾಮ 17 ಮರಿಗಳು ಹೊರಬಂದ ಘಟನೆ ಉಡುಪಿಯ ಕಲ್ಮಾಡಿಯಲ್ಲಿ ಕಂಡುಬಂದಿದೆ.
ಇತ್ತೀಚೆಗೆ ಕಲ್ಮಾಡಿಯಲ್ಲಿರುವ ಮನೆಯೊಂದರ ಅಂಗಳದ ಅಂಚಿನಲ್ಲಿದ್ದ ಗೋಣಿಚೀಲದ ರಾಶಿಯಡಿಯಲ್ಲಿ, ದೊರೆತ ನೀರುಹಾವಿನ ಮೊಟ್ಟೆಗಳು ದೊರೆತಿದ್ದು ಮನೆಯವರು ನೀಡಿದ ಮಾಹಿತಿಯಂತೆ ಉರಗ ತಜ್ಙ ಗುರುರಾಜ ಸನಿಲ್ ಅವರು ಮೊಟ್ಟೆಗಳನೆಲ್ಲ ಮನೆಗೆ ತಂದು ಕಾವಿಗಿಟ್ಟು 3 ದಿನದ ನಂತರ ಎಲ್ಲ ಮೊಟ್ಟೆಗಳೊಡೆದು ಮರಿಗಳ ಜನನವಾಗಿದೆ. ಜನನವಾದ ಮರಿಗಳ ಉದ್ದ 17ರಿಂದ 19 ಸೆಂಟಿಮೀಟರ್ ಗಳಿದ್ದು ಇವು ಗರಿಷ್ಠ 150 ಸೆಂಟಿಮೀಟರ್ ಬೆಳೆಯುತ್ತವೆ ಎಂದು ಹೇಳಲಾಗುತ್ತೆ.
ಜಲವಾಸಿಗಳಾದ ಈ ವಿಷರಹಿತ ಹಾವುಗಳು, ಸೊಳ್ಳೆ, ಅವುಗಳ ಮೊಟ್ಟೆ, ಮರಿಗಳು, ಕಪ್ಪೆ, ಗೋದಮೊಟ್ಟೆ ಮತ್ತು ಅನೇಕ ಜಾತಿಯ ಕ್ರಿಮಿಕೀಟಗಳನ್ನು ಭಕ್ಷಿಸುತ್ತ ಜೀವಿಸುವುದರಿಂದ ಡೆಂಗ್ಯು, ಮಲೇರಿಯಾದಂಥ ಸಾಂಕ್ರಾಮಿಕ ರೋಗ ರುಜಿನಗಳಿಂದ ನಾವು ಸದಾ ರಕ್ಷಣೆ ಪಡೆಯುತ್ತಿರುತ್ತೇವೆ. ಈ ಹಾವುಗಳು ಬಾವಿ, ಹಳ್ಳ ಕೊಳಗಳಲ್ಲಿ ವಾಸ ಮಾಡುವುದರಿಂದ, ಅಂಥ ನೀರಿನ ಮೂಲಗಳು ಸದಾ ಶುದ್ಧವಾಗಿರುತ್ತವೆ.
ಭಾರತದ ವನ್ಯಜೀವಿ ಕಾಯ್ದೆಯಲ್ಲಿ ಶೆಡ್ಯೂಲ್ 1 ರಲ್ಲಿ ಸೇರ್ಪಡೆಗೊಂಡಿರುವ ಈ ಹಾವುಗಳನ್ನು 1972ರಲ್ಲಿ ಸಂರಕ್ಷಿತ ಉರಗಗಳೆಂದು ಪರಿಗಣಿಸಲಾಗಿದೆ. ಇವನ್ನು ಹಿಂಸಿಸುವುದು, ಕೊಲ್ಲುವುದು ಅಕ್ಷಮ್ಯ ಅಪರಾಧವಾಗುತ್ತದೆ.