Connect with us

KARNATAKA

ಜಗತ್ತಿನ ದುಬಾರಿ ಮಾವು ‘ಮೀಯಾ ಜಾಕಿ’: ಕೆ.ಜಿ. ಹಣ್ಣಿಗೆ ₹ 2.50 ಲಕ್ಷ!

Share Information

ಕೊಪ್ಪಳ, ಮೇ 24: ದೇಶಿಯವಾಗಿ ಹತ್ತಾರು ತಳಿಗಳ ಹಣ್ಣುಗಳಿದ್ದರೂ ಮಾವಿನ ಮೇಳಕ್ಕೆ ಬಂದಿದ್ದ ಜನರಿಗೆ ಜಪಾನ್‌ನ ಮೀಯಾ ಜಾಕಿ ಹಣ್ಣಿನ ಮೇಲೇ ಕಣ್ಣು. ರುಚಿಗಿಂತಲೂ ಹೆಚ್ಚಾಗಿಅದರ ಬೆಲೆಯೇ ಕಣ್ಣು ಕುಕ್ಕುವಂತೆ ಮಾಡಿತ್ತು. 

ತೋಟಗಾರಿಕೆ ಇಲಾಖೆಯು ಏರ್ಪಡಿಸಿರುವ ಮಾವು ಮೇಳದಲ್ಲಿ ಜಗತ್ತಿನ ದುಬಾರಿ ಮಾವಿನ ತಳಿಗಳಲ್ಲಿ ಒಂದಾದ ‘ಮೀಯಾ ಜಾಕಿ’ ಮಾವು ಸಭಿಕರ ಗಮನಸೆಳೆಯಿತು. ಅಸಾಧಾರಣ ರುಚಿ, ಗುಣಮಟ್ಟ ಮತ್ತು ವಿಶಿಷ್ಟ ಗುಣಲಕ್ಷಣಗಳಿಂದ ಈ ತಳಿಯು ಹೆಸರಾಗಿದೆ. ದರ ಒಂದು ಕೆ.ಜಿ.ಗೆ ₹ 2.50 ಲಕ್ಷ!

ಜಿಲ್ಲೆಯ ರೈತರಿಗೆ ಈ ತಳಿಯನ್ನು ಪರಿಚಯಿಸಲು ಇಲಾಖೆ ಜಪಾನ್‌ನಿಂದ ಮೀಯಾ ಜಾಕಿಯನ್ನು ತರಿಸಿತ್ತು. ಒಂದು ಕೆ.ಜಿ.ಗೆ ಐದರಿಂದ ಆರು ಹಣ್ಣು ಬರುತ್ತವೆ. ₹ 40 ಸಾವಿರಕ್ಕೆ ಖರೀದಿಸಿ ಒಂದು ಹಣ್ಣು ತಂದು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಹಣ್ಣಿನ ವೈಶಿಷ್ಟ್ಯ ಕುರಿತು ಮಾಹಿತಿ ಫಲಕ ಹಾಕಿದ್ದು, ಹಣ್ಣು ಹಿಡಿದುಕೊಂಡು ಫೋಟೊ ತೆಗೆಯಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಹಣ್ಣಿನ ಪರಿಮಳಭರಿತ ವಾಸನೆಯನ್ನಾದರೂ ಸವಿಯಲು ಸಿಕ್ಕಿದ್ದು ಗ್ರಾಹಕರ ಖುಷಿ ಹೆಚ್ಚಿಸಿತು.

‘ಕಿತ್ತಳೆ ಬಣ್ಣದ ಮೀಯಾ ಜಾಕಿ ತಳಿ ಹಣ್ಣನ್ನು ಜಪಾನ್‌ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಹಣ್ಣಿನಲ್ಲಿರುವ ಸಿಹಿ ಅಂಶವನ್ನು ಬ್ರಿಕ್ಸ್‌ ಮಟ್ಟದಿಂದ ಅಳೆಯಲಾಗುತ್ತದೆ. ಈ ತಳಿಯ ಒಂದು ಸಸಿಯ ಬೆಲೆ ₹ 15 ಸಾವಿರ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಉಳಿದಂತೆ ಮೇಳದಲ್ಲಿ ಬೆನೆಶಾನ್, ರಸಪುರಿ, ಸ್ವರ್ಣರೇಖಾ, ಆಪೋಸ್, ಮಲ್ಲಿಕಾ, ತೋತಾಪುರಿ, ಸಿಂಧೂರಿ, ಕಲ್ಮಿ ಹಣ್ಣುಗಳು ಹಾಗೂ ಜಿಲ್ಲೆಯ ಕೇಸರ್‌ ತಳಿಯ ಹಣ್ಣುಗಳಿದ್ದರೂ ಎಲ್ಲರೂ ಮೊದಲು ಮೀಯಾ ಜಾಕಿಯನ್ನು ಕುತೂಹಲದಿಂದ ನೋಡುತ್ತಿದ್ದರು.


Share Information
Advertisement
Click to comment

You must be logged in to post a comment Login

Leave a Reply