KARNATAKA
ಬೆಂಗಳೂರು – ವಕೀಲೆಯನ್ನೆ ಕ್ಯಾಮರಾ ಎದುರು ಬೆತ್ತಲಾಗುವಂತೆ ಮಾಡಿ 14 ಲಕ್ಷ ವಸೂಲಿ ಮಾಡಿದ ಸೈಬರ್ ವಂಚಕರು
ಬೆಂಗಳೂರು ಎಪ್ರಿಲ್ 10 : ಕಾನೂನು ತಿಳಿದಿರುವ ವಕಿಲೇಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಅಕ್ಷರಶಃ ಎರಡು ದಿನ ಸೈಬರ್ ಒತ್ತೆಯಾಳಾಗಿದ್ದ ಘಟನೆ ನಡೆದಿದ್ದು, ವಕೀಲೆಯನ್ನು ಕ್ಯಾಮರಾ ಎದುರು ಬೆತ್ತಲೆಯಾಗುವಂತೆ ಮಾಡಿದ ವಂಚಕರು ಆಕೆಯಿಂದ 14 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ವಕೀಲೆಯ ಬೆತ್ತಲೆ ವಿಡಿಯೋಗಳನ್ನು ಬಳಸಿಕೊಂಡು, ಬ್ಲ್ಯಾಕ್‌ಮೇಲ್ ಮೂಲಕ ಮತ್ತೆ 10 ಲಕ್ಷ ರೂ ಸುಲಿಗೆ ಮಾಡಲು ಪ್ರಯತ್ನಿಸಿದ್ದಾರೆ. ಕಾನೂನು ಹಾಗೂ ಸೈಬರ್ ವಂಚನೆಯ ಕುರಿತಾದ ತಿಳಿವಳಿಕೆ ಹೊಂದಿದ್ದರೂ, ಸ್ಕ್ಯಾಮರ್‌ಗಳ ಜಾಲಕ್ಕೆ ಬಿದ್ದ ಮಹಿಳೆ ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
29 ವರ್ಷದ ವಕೀಲೆಯೊಬ್ಬರಿಗೆ ಫೆಡ್ ಎಕ್ಸ್ ಎಂಬ ಕೆಂಪೆನಿಯಿಂದ ಪಾರ್ಸೆಲ್ ಬಂದಿದೆ ಎಂದು ಹೇಳಿರುವ ತಂಡ ಅದರಲ್ಲಿ ಐದು ಪಾಸ್‌ಪೋರ್ಟ್, ಮೂರು ಕ್ರೆಡಿಟ್ ಕಾರ್ಡ್‌ಗಳು ಹಾಗೂ ನಿಷೇಧಿತ ಮಾದಕವಸ್ತು ಎಂಡಿಎಂಎ 140 ಮಾತ್ರೆಗಳಿವೆ ಎಂದು ತಿಳಿಸಿದ್ದರು. ಆದರೆ ಆ ಪಾರ್ಸೆಲ್‌ಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ವಕೀಲೆ ಪ್ರತಿಕ್ರಿಯೆ ನೀಡಿದ್ದರು. ಆಗ ಪಾರ್ಸೆಲ್ ಕಂಪೆನಿ ಸೋಗಿನಲ್ಲಿ ಮಾತನಾಡಿದ್ದ ವಂಚಕರು, ತಮ್ಮ ಹೆಸರಿನಲ್ಲಿ ವಂಚನೆ ನಡೆದಿರುವ ಬಗ್ಗೆ ಮುಂಬಯಿಯ ಸೈಬರ್ ಟೀಮ್‌ಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಇದಕ್ಕೆ ವಕೀಲೆ ಒಪ್ಪಿದಾಗ, ಕರೆಯನ್ನು ‘ಸೈಬರ್ ಅಪರಾಧ ತಂಡ’ಕ್ಕೆ ವರ್ಗಾಯಿಸಿದ್ದರು.
ನಾನು ಸ್ಕೈಪ್ ಡೌನ್‌ಲೋಡ್ ಮಾಡಿ, ಅವರನ್ನು ಸಂಪರ್ಕಿಸಿದೆ. ಅವರು ನನ್ನ ಬಳಿ ಅಕ್ರಮ ಪಾರ್ಸೆಲ್ ಬಗ್ಗೆ ವಿಚಾರಿಸಿದರು. ಜತೆಗೆ ನನ್ನ ಆಧಾರ್ ಕಾರ್ಡ್ ಮಾಹಿತಿ ಕೇಳಿದರು. ಇದರ ನಂತರ ಅವರ ‘ಉನ್ನತ ಅಧಿಕಾರಿ’ಗಳ ಮೂಲಕ ಅದನ್ನು ಪರಿಶೀಲಿಸಿದರು. ನನ್ನ ಆಧಾರ್ ಕಾರ್ಡ್ ಅನ್ನು ಮಾನವ ಕಳ್ಳಸಾಗಣೆ ಹಾಗೂ ಡ್ರಗ್ಸ್ ಸಾಗಣೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಹೈ ಅಲರ್ಟ್ ನೀಡಲಾಗಿದೆ ಎಂದರು. ಬಳಿಕ ಸ್ಕೈಪ್ ಕರೆಯನ್ನು ಅಭಿಷೇಕ್ ಚೌಹಾಣ್ ಎಂಬ ಹಿರಿಯ ಸಿಬಿಐ ಅಧಿಕಾರಿಗೆ ವರ್ಗಾಯಿಸಿದರು. ನನ್ನ ಕ್ಯಾಮೆರಾ ಆನ್ ಮಾಡಿ ಮಾತನಾಡುವಂತೆ ಅವರು ನಿರ್ದೇಶಿಸಿದರು” ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ವಕಿಲೇಯಿಂದ 14 ಲಕ್ಷ ಹಣವನ್ನು ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಲ್ಲದೇ ವಕೀಲೆಯನ್ನು ಎರಡು ದಿನ ಸೈಬರ್ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಇಷ್ಟೆಲ್ಲಾ ಹಣ ವರ್ಗಾವಣೆ ಆದ ಬಳಿಕ ಆತ ‘ಮಾದಕವಸ್ತು ಪರೀಕ್ಷೆ’ ನಡೆಸಬೇಕು. ಇದಕ್ಕಾಗಿ ಬಟ್ಟೆ ಕಳಚಿ ಎಂದು ಆದೇಶಿಸಿದ್ದ. ಕ್ಯಾಮೆರಾ ಎದುರು ಆಕೆ ಉಡುಪುಗಳನ್ನು ಕಳಚಿದ್ದರು. “ಹಾಗೆ ಮಾಡದೆ ಇದ್ದರೆ, ನನ್ನನ್ನು ಮತ್ತು ನನ್ನ ಕುಟುಂಬವನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗುವುದು. ನನ್ನನ್ನು ಹಾಗೂ ನನ್ನ ಕುಟುಂಬವನ್ನು ಸಾಯಿಸಲಾಗುವುದು ಎಂದು ಬೆದರಿಕೆ ಹಾಕಿ ನಿಂದಿಸಿದ್ದ” ಎಂದು ಆಕೆ ತಿಳಿಸಿದ್ದಾರೆ.
ಇದರ ಬಳಿಕ ಆಕೆಯ ಬೆತ್ತಲೆ ವಿಡಿಯೋಗಳನ್ನು ಇರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡತೊಡಗಿದ್ದ. ಅದೇ ದಿನ ಮಧ್ಯಾಹ್ನ 3 ಗಂಟೆ ಒಳಗೆ 10 ಲಕ್ಷ ರೂ ನೀಡದೆ ಹೋದರೆ ಡಾರ್ಕ್ ವೆಬ್ ಹಾಗೂ ಹಲವಾರು ಜನರಿಗೆ ವಿಡಿಯೋಗಳನ್ನು ಮಾರಾಟ ಮಾಡುವುದಾಗಿ ಬೆದರಿಸಿದ್ದ. ಇದರ ಬಳಿಕ ಆಕೆ ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.