LATEST NEWS
ಆಟಿ ಕಾರ್ಯಕ್ರಮದಲ್ಲಿ ದೈವ ನರ್ತನ – ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಯಾಚನೆ
ಮಂಗಳೂರು ಅಗಸ್ಟ್ 14: ಆಟಿದ ಕೂಟ ಕಾರ್ಯಕ್ರಮದಲ್ಲಿ ತುಳು ಹಾಡಿಗೆ ಮಹಿಳೆಯೊಬ್ಬರು ದೈವ ನರ್ತನ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಕ್ರೋಶ ವ್ಯಕ್ತವಾಗಿತ್ತು, ಇದೀಗ ನರ್ತನ ಮಾಡಿದ ಮಹಿಳೆ ಕದ್ರಿ ದೇವಸ್ಥಾನಕ್ಕೆ ಆಗಮಿಸಿ ಕಣ್ಣೀರಿಟ್ಟು ದೇವರ ಕ್ಷಮೆ ಕೇಳಿದ್ದಾರೆ. ಬಳಿಕ ಕದ್ರಿ ಮಂಜುನಾಥನಿಗೆ ಮಂಡಿಮಯೂರಿ ಮಹಿಳೆ ಕ್ಷಮೆಯಾಚಿಸಿದ್ದಾರೆ.
ಮಂಗಳೂರಿನ ಯೆಯ್ಯಾಡಿ ಬಳಿ ನಡೆದ ಕಾರ್ಯಕ್ರದಲ್ಲಿ ಕವಿತಾ ರಾವ್ ಎನ್ನುವವರು ತುಳುಹಾಡಿಗೆ ದೈವ ನರ್ತನ ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಅಲ್ಲದೆ ಮಹಿಳೆಯ ಡ್ಯಾನ್ಸ್ ವಿರುದ್ದ ಭಾರೀ ಆಕ್ರೋಶ ಕೇಳಿ ಬಂದಿತ್ತು, ಈ ನಡುವೆ ಆಯೋಜಕರು ಮಹಿಳೆಯ ನರ್ತನವನ್ನು ಸಮರ್ಥಿಸಿಕೊಂಡಿದ್ದು, ವಾದ ವಿವಾದಕ್ಕೆ ನಾವು ಜಗ್ಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು.
ಆದರೆ ವಿವಾದ ಹೆಚ್ಚಾಗುತ್ತಿದ್ದಂತೆ ನರ್ತನ ಮಾಡಿದ ಮಹಿಳೆ ಇಂದು ದೈವಾರಾಧಕ ದಯಾನಂದ ಕತ್ತಲ್ ಸಾರ್ ಜೊತೆಗೆ ಕದ್ರಿ ದೇವಸ್ಥಾನಕ್ಕೆ ಆಗಮಿಸಿ ರುದ್ರಾಭಿಷೇಕ ಹಾಗೂ ತಂಬಿಲ ಸೇವೆ ಸಲ್ಲಿಸಿ ದೇವರಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ. ಕಲ್ಲುರ್ಟಿ ದೈವಕ್ಕೆ ಕೋಲ ಹಾಗೂ ಚಂಡಿಕಾಯಾಗ ಕೊಡುವ ಪ್ರಾರ್ಥನೆಯನ್ನೂ ಅವರು ಮಾಡಿಕೊಂಡಿದ್ದಾರೆ. ಮಂಜುನಾಥ ದೇವರ ಸನ್ನಿಧಿಯಲ್ಲಿ ತಪ್ಪಾಯ್ತು ಅಂತ ಕವಿತಾ ರಾವ್ ಗಳಗಳನೆ ಅತ್ತುಬಿಟ್ಟಿದ್ದಾರೆ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ದೇವರ ಎದುರು ಕ್ಷಮೆಯಾಚನೆ ಮಾಡಿದ್ದಾರೆ.
ನಿತ್ಯ ದೈವಗಳ ಆರಾಧನೆ, ದೇವರ ಪೂಜೆ ಮಾಡಿಕೊಂಡು ಬಂದವಳು ನಾನು. ಆದರೆ ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿ ಕಾರಣದಿಂದ ತಪ್ಪಾಗಿದೆ. ಮಂಜುನಾಥನ ಬಳಿ ಕ್ಷಮೆ ಕೇಳಿ ತಪ್ಪು ಕಾಣಿಕೆ ಹಾಕಿದ್ದೇನೆ ಇನ್ನು ಮುಂದೆ ಯಾರೂ ದಯವಿಟ್ಟು ಇಂಥಹ ತಪ್ಪು ಮಾಡಲೇ ಬೇಡಿ ಎಂದು ಅವರು ಹೇಳಿದ್ದಾರೆ.