DAKSHINA KANNADA
ವಿದ್ಯುತ್ ತಂತಿ ಸ್ಪರ್ಷಿಸಿ ಕಾಡಾನೆ ಸಾವು, ಸುಬ್ರಹ್ಮಣ್ಯ ಅರಣ್ಯ ವಲಯದಲ್ಲಿ ಘಟನೆ
ವಿದ್ಯುತ್ ತಂತಿ ಸ್ಪರ್ಷಿಸಿ ಕಾಡಾನೆ ಸಾವು, ಸುಬ್ರಹ್ಮಣ್ಯ ಅರಣ್ಯ ವಲಯದಲ್ಲಿ ಘಟನೆ
ವಿದ್ಯುತ್ ತಂತಿ ಸ್ಪರ್ಷಿಸಿ ಕಾಡಾನೆಯೊಂದು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಅರಣ್ಯ ವಲಯ ವ್ಯಾಪ್ತಿಯ ಕೊಂಬಾರು ಸಮೀಪದ ಪುತ್ತಿಲ ಎಂಬಲ್ಲಿ ನಡೆದಿದೆ.
ಸುಮಾರು ಹನ್ನೆರಡು ವರ್ಷ ಪ್ರಾಯವಿರುವ ಗಂಡಾನೆ ಸಾವನ್ನಪ್ಪಿದ್ದು, ಸ್ಥಳೀಯರು ಇಂದು ಮುಂಜಾನೆ ಆನೆಯನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಆಹಾರ ಅರಸಿ ಆನೆಯು ಕಾಡಿನಿಂದ ರಸ್ತೆ ಬದಿಗೆ ಬಂದಿದ್ದು, ರಸ್ತೆ ಬದಿಯಲ್ಲಿ ಹಾದುಹೋಗುವ ವಿದ್ಯುತ್ ತಂತಿ ತಗುಲಿ ಆನೆ ಆನೆ ಸಾವಿಗೀಡಾಗಿದೆ
. ಮರದ ಕೊಂಬೆಯೊಂದನ್ನು ಎಳೆಯಲು ಪ್ರಯತ್ನಿಸಿದ್ದ ಸಂದರ್ಭದಲ್ಲಿ ಕೊಂಬೆ ತುಂಡಾಗಿ ವಿದ್ಯುತ್ ತಂತಿ ಮೇಲೆ ಬಿದ್ದು, ತಂತಿಯು ಮುರಿದು ಆನೆಗೆ ಸ್ಪರ್ಷಿಸಿರುವ ಸಾಧ್ಯತೆಯಿದೆ.
ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೋಸ್ಟ್ ಮಾರ್ಟಮ್ ವರದಿ ಬಳಿಕವೇ ಆನೆ ಸಾವಿಗೆ ಸ್ಪಷ್ಟ ಕಾರಣ ತಿಳಿಯುವ ಸಾಧ್ಯತೆಯಿದೆ.
ಆಹಾರವನ್ನು ಅರಸಿ ಕಾಡಾನೆಗಳು ನಾಡಿನತ್ತ ಬರುವುದು ಈ ಭಾಗಗಳಲ್ಲಿ ಸಾಮಾನ್ಯವಾಗಿದೆ.
ಕೆಲವು ಸಂದರ್ಭಗಳಲ್ಲಿ ಕೃಷಿ ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿಯನ್ನೂ ಮಾಡುವುದರ ಜೊತೆಗೆ ಆಹಾರವನ್ನು ತಿಂದು ಆನೆಗಳು ಮತ್ತೆ ಕಾಡಿಗೆ ಹೋಗುವುದು ಸಾಮಾನ್ಯವಾಗಿದೆ.
ನಾಡಿಗೆ ಬಂದ ಸಂದರ್ಭಗಳಲ್ಲಿ ಕೆಲವು ಅನಾಹುತಗಳಿಗೆ ಸಿಲುಕಿ ಆನೆಗಳು ಸಾವನ್ನಪ್ಪುವುದು ಕೂಡಾ ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆ ಈ ಕುರಿತು ಗಮನಹರಿಸಬೇಕಿದೆ.