
ಬೆಳ್ತಂಗಡಿ, ಸೆಪ್ಟೆಂಬರ್ 24: ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ನರ್ಸರಿ ಸಂಪೂರ್ಣ ಹಾನಿಯಾದ ಘಟನೆ ಮುಂಡಾಜೆಯ ಕಾಪುವಿನಲ್ಲಿ ನಡೆದಿದೆ. ಇಲ್ಲಿ ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಬೆಳೆಸಲಾಗಿದ್ದ ಹಲಸು, ಬಿದಿರು, ಗಾಳಿ, ಹೆಬ್ಬಲಸು, ಬಲಿಂದ್ರ ಪಾಲೆ ಜಾತಿಯ ಸುಮಾರು 3,200ಕ್ಕಿಂತ ಅಧಿಕ ಗಿಡಗಳನ್ನು ಆನೆಗಳು ತುಳಿದು ಸಂಪೂರ್ಣ ಧ್ವoಸಗೊಳಿಸಿವೆ.

ಒಂದು ಮರಿಯಾನೆ ಸಹಿತ ಎರಡು ಆನೆಗಳು ದಾಳಿ ಇಟ್ಟಿರಬಹುದೆಂದು ಶಂಕಿಸಲಾಗಿದೆ. ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನೇರ್ತನೆಯಲ್ಲಿ ಕಂಡುಬಂದಿದ್ದ ಕಾಡಾನೆಗಳು ಇಲ್ಲಿಯೂ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಕಳೆದ ವರ್ಷವೂ ಈ ನರ್ಸರಿಗೆ ಕಾಡಾನೆಗಳು ದಾಳಿ ಇಟ್ಟು ಸಾವಿರಾರು ಗಿಡ ಹಾಗೂ ನರ್ಸರಿ ಸೊತ್ತುಗಳಿಗೆ ಹಾನಿ ಉಂಟು ಮಾಡಿದ್ದವು.





