DAKSHINA KANNADA
ಪೊಲೀಸ್ ಠಾಣೆಯಲ್ಲಿ ಕೋವಿ – ಗದ್ದೆಯಲ್ಲಿ ರೈತನ ಮೇಲೆ ಕಾಡು ಹಂದಿ ದಾಳಿ
ಪುತ್ತೂರು ಎಪ್ರಿಲ್ 10: ಹಾಡುಹಗಲೇ ಕೃಷಿಕನೊಬ್ಬರ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆ ಕಡಬ ತಾಲೂಕಿನ ಸವಣೂರಿನ ಅಗರಿ ಎಂಬಲ್ಲಿ ನಡೆದಿದೆ. ರತ್ನಾಕರ ಪೂಜಾರಿ ಗಂಭೀರವಾಗಿ ಗಾಯಗೊಂಡ ಕೃಷಿಕ, ತನ್ನ ಕೃಷಿ ತೋಟಕ್ಕೆ ನೀರು ಬಿಡಲು ಹೋದ ಸಂದರ್ಭದಲ್ಲಿ ಕಾಡು ಹಂದಿ ದಾಳಿ ಮಾಡಿದೆ. ಈ ವೇಳೆ ರತ್ನಾಕರ ಪೂಜಾರಿಯವರ ಕೈ ಮತ್ತು ಕಾಲನ್ನು ಜಗಿದು ಗಾಯ ಮಾಡಿದ್ದು, ಹಂದಿಯ ದಾಳಿಯನ್ನು ಕಂಡು ರತ್ನಾಕರ ಪೂಜಾರಿಯವರ ದನಗಳು ಬೊಬ್ಬೆ ಹೊಡೆದ ಬಳಿಕ ಹಂದಿ ಹೆದರಿ ಓಡಿ ಹೋಗಿದೆ.
ಇದೀಗ ಈ ಘಟನೆಗೆ ಪೊಲೀಸ್ ಇಲಾಖೆಯ ನೇರ ಕಾರಣ ಎಂದು ರೈತ ಸಂಘ ಆರೋಪಿಸಿದ್ದು, ಚುನಾವಣೆ ಹಿನ್ನಲೆ ಜಿಲ್ಲಾಡಳಿತ ರೈತರ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿ ಇಡುವಂತೆ ಒತ್ತಾಯಿಸಿ ಎಲ್ಲಾ ಕೋವಿಗಳನ್ನು ಠಾಣೆಯಲ್ಲಿಟ್ಟುಕೊಂಡಿದೆ. ಹೀಗಾಗಿ ಕಾಡುಹಂದಿ ದಾಳಿಗೆ ತುತ್ತಾಗಿರುವ ರತ್ನಾಕರ ಪೂಜಾರಿ ಅವರು ಕೂಡ ತಮ್ಮ ಬಳಿ ಇದ್ದ ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದಾರೆ. ಇದರಿಂದಾಗಿ ಈ ಘಟನೆ ನಡೆದಿದ್ದು, ಕೋವಿ ಕೃಷಿಕನ ಬಳಿ ಇರುತ್ತಿದ್ದರೆ ಈ ರೀತಿಯ ಅವಘಡ ನಡೆಯುತ್ತಿರಲಿಲ್ಲ . ಈ ಘಟನೆ ನಡೆದ ತಕ್ಷಣ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಕೋವಿ ಠೇವಣಿ ಇಟ್ಟ ಪರಿಣಾಮ ಹಂದಿ ದಾಳಿಯಾಗಿದೆ ಎನ್ನುವ ಮಾಹಿತಿ ನೀಡಲಾಗಿದೆ.
ಕೋವಿ ಠೇವಣಿ ಇಡುವ ಕಾನೂನಿನಿಂದ ಕಾಡು ಪ್ರಾಣಿಗಳ ಸಮಸ್ಯೆ ಎದುರಿಸುವ ಕೃಷಿಕರನ್ನು ಮುಕ್ತ ಮಾಡಬೇಕು ಎಂದು ಈಗಾಗಲೇ ಕೃಷಿಕರು ಮನವಿ ಮಾಡಿದ್ದರೂ ಚುನಾವಣಾ ಆಯೋಗ ಮಾತ್ರ ಯಾವುದೇ ತೀರ್ಮಾನಕೈಗೊಳ್ಳದೇ ಸುಮ್ಮನೆ ಕುಳಿತಿದೆ. ಇದೀಗ ರೈತನ ಮೇಲೆ ಕಾಡು ಹಂದಿ ದಾಳಿ ಮಾಡಿದ್ದು, ರೈತರ ಎಲ್ಲಾ ಖರ್ಚುವೆಚ್ಚಗಳನ್ನು ಸರಕಾರವೇ ಭರಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ. ಇಲ್ಲದೇ ಹೋದಲ್ಲಿ ಕಾಡುಪ್ರಾಣಿಗಳು ಕೃಷಿತೋಟಕ್ಕೆ ಬಂದಾಗ ಪೋಲೀಸರಿಗೆ ಕರೆ ಮಾಡಲು ಕೃಷಿಕರು ನಿರ್ಧರಿಸಿದ್ದು, ಪೋಲೀಸರೇ ಬಂದು ಕಾಡು ಪ್ರಾಣಿಗಳನ್ನು ಓಡಿಸಬೇಕು ಎಂದು ಕೃಷಿಕರು ಆಗ್ರಸಿದ್ದಾರೆ. ಸದ್ಯ ಕೋವಿ ವಿವಾದ ಚುನಾವಣೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.