Connect with us

    KARNATAKA

    ಆಧುನಿಕ ಪ್ರೇಮ ಕಥೆ..ಮೃತ ಪತ್ನಿಯ ಕನಸಿನ ಮನೆಯಲ್ಲೆ ಪುತ್ಥಳಿ ಸ್ಥಾಪಿಸಿದ ಕೊಪ್ಪಳದ ಉದ್ಯಮಿ

    ಕೊಪ್ಪಳ: ಒಂದು ಅಪರೂಪದ ಪ್ರೇಮಕಥೆಗೆ ಕೊಪ್ಪಳ ಸಾಕ್ಷಿಯಾಗಿದೆ. ಎರಡು ವರ್ಷಗಳ ಹಿಂದೆ ಅಗಲಿದ ತಮ್ಮ ಪತ್ನಿಯ ನೆನಪಾರ್ಥವಾಗಿ ಮೇಣದ ಮೂರ್ತಿಯೊಂದಿಗೆ ಉದ್ಯಮಿಯೊಬ್ಬರು ಮನೆಯ ಗೃಹ ಪ್ರವೇಶ ನಡೆಸಿದ್ದಾರೆ.
    ಮುಮ್ತಾಜ್‌ಗಾಗಿ ಭವ್ಯ ತಾಜ್‌ಮಹಲ್‌ ಕಟ್ಟಿದ ರಾಜ ಷಹಜಹಾನ್‌, ನೀರು ತರುವಾಗ ಬೆಟ್ಟದಿಂದ ಬಿದ್ದು ಸಾವಿಗೀಡಾದ ಪತ್ನಿಯ ನೆನಪಲ್ಲಿ ಏಕಾಂಗಿಯಾಗಿ ಬೆಟ್ಟವನ್ನೇ ಕೊರೆದ ದಶರಥ್‌ ಮಾಂಜಿ – ಹೀಗೆ ಹಲವು ಪ್ರೇಮ ಕಥೆಗಳ ಸಾಲಿಗೆ ಹೀಗೊಂದು ಮನಮಿಡಿಯುವ ಅಪರೂಪದ ಪ್ರೇಮ ಕಥೆ!

    ಭಾಗ್ಯನಗರ ಪಟ್ಟಣದ ಕೂದಲು ಉದ್ಯಮಿ ಶ್ರೀನಿವಾಸ್‌ ಗುಪ್ತಾ ಅವರೇ ಈ ವ್ಯಕ್ತಿ. ಶ್ರೀನಿವಾಸ್ ಗುಪ್ತಾ ಅವರ ಪತ್ನಿ ಕೆವಿಎನ್ ಮಾಧವಿ ಅವರಿಗೆ ತಮ್ಮ ಕನಸಿನ ಮನೆಯೊಂದನ್ನು ಕಟ್ಟಬೇಕೆಂದು ಆಸೆ ಇತ್ತು. ಅದರಂತೆ ಅವರು ಮನೆಯ ಭೂಮಿ ಪೂಜೆ ನೆರವೇರಿಸಿ, ಮನೆ ನಿರ್ಮಾಣ ಸಹ ಆರಂಭ ಮಾಡಿದ್ದರು. ಆದರೆ 2017ರ ಜುಲೈ 5 ರಂದು ತಿರುಪತಿಗೆ ಹೋಗುವ ವೇಳೆಯಲ್ಲಿ ಕೋಲಾರದ ಬಳಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಆ ಬಳಿಕ ಮನೆ ನಿರ್ಮಾಣದ ಕೆಲಸವನ್ನು ಶ್ರೀನಿವಾಸ್ ಗುಪ್ತಾ ಅರ್ಧಕ್ಕೆ ನಿಲ್ಲಿಸಿದ್ದರು. ನಂತರ ಮಕ್ಕಳ ಒತ್ತಾಯದ ಮೆರೆಗೆ ಮನೆ ನಿರ್ಮಾಣದ ಕೆಲಸವನ್ನು ಪುನಃ ಆರಂಭ ಮಾಡಿದರು.


    ಪತ್ನಿ ಅಗಲಿದ್ದರೂ ಅವರ ನೆನಪಲ್ಲೇ ಶ್ರೀನಿವಾಸ್‌ ಗುಪ್ತಾ ಕೊರಗುತ್ತಿದ್ದರು. ಸಾಯುವ ಮುನ್ನ ಹೊಸ ಮನೆ ಕಟ್ಟಿಸಬೇಕು ಎನ್ನುವುದು ಅವರ ಪತ್ನಿಯ ಮಹದಾಸೆಯಾಗಿತ್ತು. ಮನೆಯೇನೋ ನಿರ್ಮಾಣವಾಯಿತು. ಆದರೆ ಪತ್ನಿ ಅಷ್ಟೊತ್ತಿಗಾಗಲೇ ಇಹಲೋಕದ ಪಯಣ ಮುಗಿಸಿದ್ದರು. ಆಗ ಅವರ ತಲೆಗೆ ಬಂದಿದ್ದೇ ಮೇಣದ ಪ್ರತಿಮೆಯ ಯೋಚನೆ. ಅದರಂತೆ ಬೆಂಗಳೂರು ಮೂಲದ ಕಲಾವಿದ ರಂಗಣ್ಣನವರ್‌ ಅವರನ್ನು ಸಂಪರ್ಕಿಸಿದ ಶ್ರೀನಿವಾಸ್‌ ಗುಪ್ತಾ, ಶ್ರೀಧರ್‌ ಮೂರ್ತಿ ಅವರಿಂದ ಸಿಲಿಕಾನ್‌ ವ್ಯಾಕ್ಸ್‌ನಲ್ಲಿ ಪತ್ನಿಯ ಸುಂದರ ಮೂರ್ತಿ ಮಾಡಿಸಿದ್ದಾರೆ. ಹೀಗೆ ‘ಕುಟುಂಬ ಸಮೇತರಾಗಿ’ ಅವರು ತಮ್ಮ ಕನಸಿನ ಮನೆಯ ಗೃಹ ಪ್ರವೇಶ ನಡೆಸಿದ್ದಾರೆ.


    “ನನ್ನ ಹೆಂಡತಿಯನ್ನು ಮತ್ತೆ ನನ್ನ ಮನೆಯಲ್ಲಿ ನೋಡುವುದೇ ಒಂದು ಸೌಭಾಗ್ಯ. ಏಕೆಂದರೆ ಇದು ಅವಳ ಕನಸಿನ ಮನೆಯಾಗಿತ್ತು. ನನ್ನ ಹೆಂಡತಿಯ ಪ್ರತಿಮೆ ತಯಾರಿಸಲು ಬೆಂಗಳೂರಿನ ಕಲಾವಿದ ಶ್ರೀಧರ್ ಮೂರ್ತಿ ಒಂದು ವರ್ಷ ತೆಗೆದುಕೊಂಡರು. ಪ್ರತಿಮೆ ಹೆಚ್ಚು ಬಾಳಿಕೆ ಬರಲು ಸಿಲಿಕಾನ್ ಅನ್ನು ಬಳಸಲಾಗಿದೆ,” ಎನ್ನುತ್ತಾರೆ ಶ್ರೀನಿವಾಸ್‌ ಗುಪ್ತಾ.

    ಸಿಲಿಕಾನ್ ಪ್ರತಿಮೆ ಹೇಗಿದೆ….?

     

    ಈ ಸಿಲಿಕಾನ್ ಪ್ರತಿಮೆಯನ್ನು ಮಾಡಲು ಶ್ರೀಧರ ಮೂರ್ತಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸಮಯ ತೆಗೆದುಕೊಂಡಿದ್ದಾರೆ. ಈ ಸಿಲಿಕಾನ್ ಪ್ರತಿಮೆಗೆ ಜೀವ ಇಲ್ಲ ಎನ್ನುವುದನ್ನು ಒಂದು ಬಿಟ್ಟರೆ ಥೇಟ್ ಮಾಧವಿ ಅವರ ತರಹನೇ ಇದೆ. ಮಾಧವಿ ಅವರ ಸಿಲಿಕಾನ್ ಪ್ರತಿಮೆಯನ್ನು ಮನೆಯ ಹಾಲ್ ನಲ್ಲಿಟ್ಟಿದ್ದು, ಯಾರಾದರೂ ಮನೆಗೆ ಬಂದರೆ ಇವರನ್ನು ಮಾತನಾಡಿಸದೆ ಇರಲಾರರು. ಈ ಪ್ರತಿಮೆಯಲ್ಲಿ ಮಾಧವಿ ಅವರ ಉಡುತ್ತಿದ್ದ ಸೀರೆಯನ್ನೇ ಉಡಿಸಲಾಗಿದ್ದು, ಅವರು ತೊಡುತ್ತಿದ್ದ ಬಂಗಾರದ ಆಭರಣಗಳನ್ನು ಅವರ ಮೈಮೇಲೆ ಹಾಕಲಾಗಿದೆ. ಜೊತೆಗೆ ಅವರಂತೆಯೇ ಹೇರ್ ಸ್ಟೈಲ್ ಸಹ ಮಾಡಲಾಗಿದೆ. ಈ ಪ್ರತಿಮೆಯ ದೇಹದ ಭಾಗಗಳು ಫ್ಲೆಕ್ಸಿಬಲ್ ಆಗಿದ್ದು, ಮೇಕಪ್, ಸೀರೆ ಬದಲಾವಣೆ, ಹೆರ್ ಸ್ಟೈಲ್ ಸಹ ಚೇಂಜ್ ಮಾಡಬಹುದಾಗಿದ್ದು, ಎಲ್ಲಿಗೆ ಬೇಕಾದರೂ ಸಹ ಕ್ಯಾರಿ ಮಾಡಬಹುದಾಗಿದೆ.
    ಮಾಧವಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರು ಈ ಪ್ರತಿಮೆ ಬಂದಾಗಿನಿಂದ ತಮ್ಮ ತಾಯಿ ಎಲ್ಲಿಗೂ ಹೋಗಿಲ್ಲ. ನಮ್ಮ ಜೊತೆಗೇನೆ ಇದ್ದಾರೆ ಎನ್ನುವ ಭಾವದಲ್ಲಿ ಇದ್ದಾರೆ. ಅಷ್ಟೇ ಅಲ್ಲ ತಮ್ಮ ತಾಯಿಯ ಪ್ರತಿಮೆಯ ಪಕ್ಕಕ್ಕೆ ಕುಳಿತು ಖುಷಿ ಪಡುತ್ತಾರೆ

    Share Information
    Advertisement
    Click to comment

    You must be logged in to post a comment Login

    Leave a Reply