Connect with us

    LATEST NEWS

    “ಚ್ಯವನ ಪ್ರಾಶ” ಯಾಕೆ ಸೇವಿಸಬೇಕು? ಈ ಬಗ್ಗೆ ಇಲ್ಲಿದೆ ನೋಡಿ ಪೂರ್ಣ ಮಾಹಿತಿ

    “ಚ್ಯವನ ಪ್ರಾಶ” ಈ ಹೆಸರನ್ನು ಕೇಳರಿಯದವರು ತುಂಬಾ ಅಪರೂಪ. ಮಕ್ಕಳಿಂದ ಹಿಡಿದು ಮುದುಕರವರೆಗೂ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಅನೇಕ ರೋಗಗಳಲ್ಲಿ ಔಷಧ ರೂಪದಲ್ಲಿ ಬಳಸಲ್ಪಡುವ ಈ ಚ್ಯವನ ಪ್ರಾಶದ ಬಗ್ಗೆ ಒಂದಷ್ಟು ಮುಖ್ಯ ವಿಷಯಗಳನ್ನು ಇಂದು ಇಲ್ಲಿ ತಿಳಿದುಕೊಳ್ಳೋಣ.

    “ಚ್ಯವನ ಪ್ರಾಶ” ಇದೊಂದು ಅನೇಕ ಔಷಧ ಗುಣಗಳುಳ್ಳ ಗಿಡಮೂಲಿಕೆಗಳಿಂದ ತಯಾರಿಸಿದ ಒಂದು ಪ್ರಕಾರದ ಲೇಹ್ಯ. ಇದರ ಪ್ರಮುಖ ಮೂಲಿಕೆ ಅಮಾಲಕಿ ಅಂದರೆ ಬೆಟ್ಟದ ನೆಲ್ಲಿಕಾಯಿ. ಇದನ್ನು ‘ಇಂಡಿಯನ್ ಗೂಸ್ಬೆರಿ’ (Indian Gooseberry) ಎಂದು ಕರೆಯುತ್ತಾರೆ.

    ಚ್ಯವನ ಪ್ರಾಶದ ಹಿಂದಿನ ಇತಿಹಾಸ:

    ಪುರಾತನ ಭಾರತದಲ್ಲಿ ಪುಲೋಮ ಮತ್ತು ಋಷಿ ಭೃಗು ದಂಪತಿಗಳು ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದರು. ಪುಲೋಮಾ ಗರ್ಭಿಣಿಯಾಗಿದ್ದರು ಮತ್ತು ತಾಯ್ತನಕ್ಕಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಆದರೆ ಆಕೆಯು ಗರ್ಭಿಣಿಯಾಗಿರುವಾಗ ಒಬ್ಬ ರಾಕ್ಷಸನಿಂದ ಆಕ್ರಮಣಕ್ಕೊಳಗಾದರು. ಇದರಿಂದ ಅಕಾಲಿಕ ಹೆರಿಗೆ ಸಂಭವಿಸಿತು. ಆಕೆ ಗಂಡು ಮಗುವಿಗೆ ಜನ್ಮ ನೀಡಿದರು. ದಂಪತಿಗಳು ಆ ಗಂಡು ಮಗುವಿಗೆ ‘ಚ್ಯವನ’ ಎಂದು ಹೆಸರಿಟ್ಟರು.

    ಚ್ಯವನರು ಬುದ್ಧಿವಂತರು ಹಾಗು ಆಧ್ಯಾತ್ಮಿಕ ವಿಷಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಆದರೆ ಅವರಿಗೆ ಬಾಧಿಸುತ್ತಿದ್ದ ತೊಂದರೆಯೆಂದರೆ ವಯಸ್ಸಿಗೂ ಮುಂಚಿನ ವೃದ್ಧಾಪ್ಯ ಮತ್ತು ಅನೇಕ ರೋಗಗಳಿಂದ ಪೀಡಿತರಾಗಿದ್ದರು. ಹೀಗಿರುವಾಗ ಅವರು ದೇವರುಗಳನ್ನು ಪ್ರಾರ್ಥಿಸಿದರು.ಆಗ ಅಶ್ವಿನಿ ಕುಮಾರರು – ದೇವತೆಗಳ ವೈದ್ಯರು, ಚ್ಯವನರ ಸಹಾಯಕ್ಕೆ ಬಂದರು. ಅವರು ಗಿಡಮೂಲಿಕೆಗಳಿಂದ ತಯಾರಾದ ಲೇಹ್ಯವನ್ನು ಚ್ಯವನರ ಕೈಗೆ ಕೊಟ್ಟು, ಆ ಲೇಹ್ಯವನ್ನು ಪ್ರತಿನಿತ್ಯ ಸೇವಿಸುವಂತೆ ಆದೇಶಿಸಿದರು. ಇದರಂತೆ ಆ ಲೇಹ್ಯವನ್ನು ತಪ್ಪದೇ ಸೇವಿಸಿದ ನಂತರ, ಮಹರ್ಷಿ ಚ್ಯವನರು ತಮ್ಮ ಎಲ್ಲಾ ರೋಗಗಳು ಮತ್ತು ವೃದ್ಧಾಪ್ಯ ಸಂಬಂಧಿತ ತೊಂದರೆಗಳಿಂದ ಹೊರಬಂದರು. ಆದ್ದರಿಂದ, ಅವರು ಮತ್ತೆ ಯುವಕರಾದರು ಮತ್ತು ಉತ್ತಮ ಮತ್ತು ಯಶಸ್ವಿ ಜೀವನವನ್ನು ಮುಂದುವರೆಸಿದರು. ಚ್ಯವನರ ಆರೋಗ್ಯವನ್ನು ಪುನರುಜ್ಜೀವನಗೊಳಿಸಿದ ಗಿಡಮೂಲಿಕೆಗಳ ಆ ಲೇಹ್ಯವನ್ನು ಅವರ ಹೆಸರಿನಿಂದಲೇ ಕರೆಯಲಾಗುತ್ತದೆ. ಇದೇ ‘ಚ್ಯವನ ಪ್ರಾಶ್’ ಹೆಸರಿನ ಹಿಂದಿರುವ ಇತಿಹಾಸ.

    ತೆಗೆದುಕೊಳ್ಳುವ ಕ್ರಮ

    •  ವಯಸ್ಕರು ಸಾಮಾನ್ಯವಾಗಿ ಒಂದರಿಂದ ಎರಡು ಚಮಚದ ವರೆಗೂ ತೆಗೆದುಕೊಳ್ಳಬಹುದು.
    •  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.
    • ಇದರ ಜೊತೆ ಹಾಲನ್ನು ಸೇವಿಸುವುದು ಒಳ್ಳೆಯದು. ಆದರೆ ಯಾರಿಗೆ ಹಾಲು ಕುಡಿಯಲು ಸಾಧ್ಯವಿಲ್ಲವೋ ಅಥವಾ ಯಾವುದೇ  ಕಾರಣಗಳಿಂದ ಹಾಲು ದೇಹಕ್ಕೆ ಒಗ್ಗುವುದಿಲ್ಲವೋ, ಅವರು ನೀರಿನ ಜೊತೆಯಲ್ಲಿ ಕೂಡ ಸೇವಿಸಬಹುದು.
    • ಇದನ್ನು ಜೇನುತುಪ್ಪ, ಆಮಲಕಿಯ ರಸ ಮತ್ತು ಗುಲ್ಕಂದ ಜೊತೆಯಲ್ಲಿ ಸೇವನೆ ಮಾಡುವುದೂ ಕೂಡ ಚಾಲ್ತಿಯಲ್ಲಿದೆ.
    •  ಮಕ್ಕಳಿಗೂ ಚ್ಯವನ ಪ್ರಾಶವನ್ನು ಕೊಡಬಹುದು. ಅದು ಅವರಲ್ಲಿ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ ಮತ್ತು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಕೆಮ್ಮು, ನೆಗಡಿ ಮುಂತಾದ ಅನೇಕ ರೋಗಗಳಲ್ಲಿ ರಸಾಯನ ರೂಪದಲ್ಲಿ ಕೊಡುವುದು ಸಹಕಾರಿ.
    • ಮಕ್ಕಳಿಗೆ ಚ್ಯವನ ಪ್ರಾಶವನ್ನು ಕೊಡುವಾಗ ಅವರ ವಯಸ್ಸು ಹಾಗು ಜೀರ್ಣ ಕ್ರಿಯೆಯ ಶಕ್ತಿಯ ಆಧಾರದ ಮೇರೆಗೆ ಅದರ ಡೋಸ್ ಅನ್ನು ನಿರ್ಧಾರ ಮಾಡಲಾಗುತ್ತದೆ.

    ಉಪಯುಕ್ತತೆ

    •  ದೇಹದ ರೋಗಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
    •  ಸ್ಮರಣಶಕ್ತಿ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ.
    •  ಮಲಬದ್ಧತೆಯನ್ನು ನಿವಾರಿಸುತ್ತದೆ.
    •  ನರಮಂಡಲದ ಕಾರ್ಯಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ.
    •  ಫಲವತ್ತತೆ (Fertility) ಹೆಚ್ಚಿಸುತ್ತದೆ.
    •  ಹೆಣ್ಣುಮಕ್ಕಳಲ್ಲಿ ಋತುಚಕ್ರವನ್ನು ಕ್ರಮವಾಗಿ ಇರಿಸುತ್ತದೆ.
    •  ರಕ್ತವನ್ನು ಶುದ್ಧೀಕರಿಸುತ್ತದೆ ಹಾಗು ಅನೇಕ ಶಾರೀರಿಕ ಕ್ರಿಯಾಚಟುವಟಿಕೆಗಳಿಂದ ಉತ್ಪನ್ನವಾದ ವಿಷ (toxins) ವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
    •  ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
    • ಮಕ್ಕಳು ಮತ್ತು ವೃದ್ಧರ ಆರೋಗ್ಯ ಕಾಪಾಡಿಕೊಳ್ಳಲು ಇದನ್ನು ವಿಶೇಷವಾಗಿ ಸೂಚಿಸಲಾಗಿದೆ.
    •  ಬಲವರ್ಧನೆ ಮತ್ತು ಕೆಮ್ಮು, ಶೀತ, ಗಂಟಲು ನೋವುಗಳ ನಿವಾರಣೆಗೆ ಸಹಾಯ ಮಾಡುತ್ತದೆ.

    ಪ್ರತಿಕೂಲ ಪ್ರಭಾವಗಳು

    ಸಾಮಾನ್ಯವಾಗಿ ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವಂತೆ ಮತ್ತು ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಸೇವಿಸಲಾದ ಚ್ಯವನ ಪ್ರಾಶದಿಂದ ಅನುಕೂಲಗಳೇ ಹೆಚ್ಚು. ಆದರೆ ಕೆಲವರಲ್ಲಿ ಕೆಲವೊಮ್ಮೆ ಈ ಕೆಳಗಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ:

    • ದೇಹದಲ್ಲಿ ಉಷ್ಣತೆ ಹೆಚ್ಚುವುದು.
    •  ಎದೆಯಲ್ಲಿ ಉರಿ.
    • ಮಲ ವಿಸರ್ಜನೆ ಹೆಚ್ಚಾಗುವುದು.
    • ಡೈಬಿಟೀಸ್ ರೋಗದಿಂದ ಬಳಲುತ್ತಿರುವವರು ಈ ಲೇಹ್ಯವನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸುವುದು ಅಗತ್ಯ, ಕಾರಣ ಈ ಲೇಹ್ಯದಲ್ಲಿ ಸಕ್ಕರೆಯನ್ನೂ ಸೇರಿಸಿರುವುದರಿಂದ.
    •  ಸಹಜವಾಗಿಯೇ ಪಿತ್ತವು ಹೆಚ್ಚಾಗಿರುವವರಲ್ಲಿ ಇದರ ಸೇವನೆಯಿಂದ ದೇಹದಲ್ಲಿ ಉಷ್ಣಾಂಶವು ಹೆಚ್ಚಾಗುವುದು, ಅತಿಯಾದ ಬೆವರುವಿಕೆ ಮತ್ತು ಹೊಟ್ಟೆಯಲ್ಲಿ ಹುಣ್ಣಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಇಂತಹವರು ಆಯುರ್ವೇದ ವೈದ್ಯರ ಸಲಹೆ ಮೇರೆಗೆ ಸೇವಿಸುವುದು ಒಳ್ಳೆಯದು.

    ಚ್ಯವನ ಪ್ರಾಶದ ಸೇವನೆ ತುಂಬಾ ಪ್ರಚಲಿತದಲ್ಲಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನೆನಪಿನಶಕ್ತಿಯನ್ನು ವೃದ್ಧಿಸಲು, ಮತ್ತು ಶೀತ, ಕೆಮ್ಮು ಮುಂತಾದ ಸಾಮಾನ್ಯ ರೋಗಗಳನ್ನು ನಿವಾರಿಸಲು ಬಹಳ ಪರಿಣಾಮಕಾರಿ. ಆಯುರ್ವೇದ ವೈದ್ಯರು ನೀಡುವ ಸಲಹೆ ಹಾಗೂ ಸೂಚನೆಗಳಂತೆ ಚ್ಯವನ ಪ್ರಾಶವನ್ನು ಸೇವಿಸುವುದು ಅತ್ಯಂತ ಆವಶ್ಯಕ.

    ಇದು ಮಕ್ಕಳಿಂದ ವೃದ್ಧರ ತನಕ ಎಲ್ಲಾ ವಯೋಮಾನದವರಿಗೆ ಸೂಕ್ತವಾಗಿದೆ. ಆರೋಗ್ಯ ಕಾಪಾಡಿಕೊಳ್ಳಲು, ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು, ಹಾಗೂ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಚ್ಯವನ ಪ್ರಾಶವು ಅತ್ಯುತ್ತಮ ಲೇಹ್ಯವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply