FILM
ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ರನ್ನು ಯಾಕೆ ಅರೆಸ್ಟ್ ಮಾಡಿಲ್ಲ…..ಕೋರ್ಟ್ ಪ್ರಶ್ನೆ

ನವದೆಹಲಿ ನವೆಂಬರ್ 10: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಜಾರಿ ನಿರ್ದೇಶನಾಲಯವನ್ನು ದೆಹಲಿ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ವಂಚಕ ಸುಕೇಶ್ ಚಂದ್ರಶೇಖರ್ ಆರೋಪಿಯಾಗಿರುವ ಈ ಪ್ರಕರಣದಲ್ಲಿ ನಟಿ ಬಂಧನ ವಿಷಯದಲ್ಲಿ ಮನಸೋ ಇಚ್ಚೆಯಾಗಿ ವರ್ತಿಸುವ ತನಿಖಾ ಸಂಸ್ಥೆಯ ಕಾರ್ಯವೈಖರಿಯನ್ನು ಇದೇ ವೇಳೆ ಪೀಠ ಟೀಕಿಸಿತು. ಈ ಹಿಂದೆ ಜಾಕ್ವೆಲಿನ್ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್, ಜಾಕ್ವೆಲಿನ್ ಪರ ವಕೀಲರು ಮತ್ತು ಇ.ಡಿ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನಂತರ ನಟಿಯ ಜಾಮೀನು ಅರ್ಜಿಯ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದರು.

ಹಣದ ಕೊರತೆಯಿಲ್ಲದ ಕಾರಣ ಜಾಕ್ವೆಲಿನ್ ಸುಲಭವಾಗಿ ದೇಶದಿಂದ ಪರಾರಿಯಾಗಬಹುದು ಎಂದು ಸಂಸ್ಥೆ ಸಲ್ಲಿಸಿದ ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ, ನಟಿಯನ್ನು ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿತು. ನಟಿ ದೇಶ ತೊರೆಯುವುದನ್ನು ತಡೆಯಲು ವಿಮಾನ ನಿಲ್ದಾಣಗಳಲ್ಲಿ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಲಾಗಿದೆ ಎಂದು ಇ.ಡಿ ತಿಳಿಸಿತು. ‘ಎಲ್‌ಒಸಿ ನೀಡಿದ್ದರೂ ತನಿಖೆ ಸಮಯದಲ್ಲಿ ಜಾಕ್ವೆಲಿನ್ ಅವರನ್ನು ಏಕೆ ಬಂಧಿಸಿಲ್ಲ? ಇತರೆ ಆರೋಪಿಗಳು ಜೈಲಿನಲ್ಲಿದ್ದಾರೆ. ಮನಸೋ ಇಚ್ಛೆಯಾಗಿ ಯಾಕೆ ವರ್ತಿಸುತ್ತೀರಾ’ ಎಂದು ತನಿಖಾ ಸಂಸ್ಥೆಯನ್ನು ಪೀಠ ಪ್ರಶ್ನಿಸಿದೆ.