LATEST NEWS
ಎಲ್ಲಾ ಓಕೆ… ಪಂಪ್ ವೆಲ್ ಪ್ಲೈಓವರ್ ಗೆ 56 ಕೋಟಿ ಸಾಲ ಯಾಕೆ……..?

ಎಲ್ಲಾ ಓಕೆ… ಪಂಪ್ ವೆಲ್ ಪ್ಲೈಓವರ್ ಗೆ 56 ಕೋಟಿ ಸಾಲ ಯಾಕೆ……..?
ಮಂಗಳೂರು ಜನವರಿ 6: ಮಂಗಳೂರಿನ ಪಂಪ್ವೆಲ್ ಪ್ಲೈಓವರ್ ವಿಚಾರ ಈಗ ಮಂಗಳೂರು ಮಾತ್ರವಲ್ಲ ರಾಜ್ಯದೆಲ್ಲಡೆ ಚರ್ಚೆಗೆ ಕಾರಣವಾಗಿದೆ. ಈ ವಿವಾದಿತ ಪಂಪ್ವೆಲ್ ಪ್ಲೈಓವರ್ ಕುರಿತ ಮೆಮ್ಸ್ ಗಳು ಟ್ರೋಲ್ ಗಳು ಭಾರಿ ವೈರಲ್ ಆಗಿದೆ.
ಜನವರಿ 1 ರಂದು ನಿಗದಿಯಾದಂತೆ ಈ ಮೇಲ್ಸೆತುವೆ ಉದ್ಘಾಟನೆಗೊಳ್ಳಬೇಕಿತ್ತು. ಆದರೆ ಕಾಮಗಾರಿ ಅಪೂರ್ಣಗೊಂಡಿರುವ ಕಾರಣ ಮತ್ತೆ ಹೊಸ ಡೆಡ್ ಲೈನ್ ನೀಡಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಸುತ್ತ ಸುತ್ತಿಕೊಂಡಿರುವ ಈ ವಿವಾದಿತ ಮೇಲ್ಸೆತುವೆ ಕಾಮಗಾರಿ ಮುಗಿಯುವ ಸೂಚನೆ ದೂರ ದೂರದವರೆಗೂ ಕಂಡು ಬರುತ್ತಿಲ್ಲ. ಈ ಪ್ಲೈಓವರ್ ಉದ್ಘಾಟನೆಗೆ ಈ ವರೆಗೆ 5 ಬರೀ ದಿನಾಂಕ ನಿಗದಿಪಡಿಸಲಾಗಿತ್ತು. ಆದರೂ ಈವರೆಗೆ ಪಂಪ್ವೆಲ್ ಪ್ಲೈಓವರ್ ಕುರಿತು ಕಳೆದ 10 ವರ್ಷಗಳಿಂದ ನೀಡಲಾಗುತ್ತಿರುವ ಹೇಳಿಕೆಗಳು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ. ಈ ಯೋಜನೆಯಲ್ಲಿ ಎಲ್ಲೋ “ದಾಲ್ ಮೇ ಕುಚ್ ಕಾಲ ” ಇದೆ ಎಂಬ ಸಂಶಯ ವ್ಯಕ್ತವಾಗಿದೆ.

ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿನಲ್ಲಿ ಪಂಪ್ವೆಲ್ ಮೇಲ್ಸೆತುವೆ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಕಾಮಗಾರಿಯ ಗುತ್ತಿಗೆ ಪಡೆದ ನವಯುಗ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಸಂಸದ ನಳಿನ್ ಕುಮಾರ್ ಕಟೀಲ್ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ನವಯುಗ ಸಂಸ್ಥೆಯ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಧಿಕಾರಿಗಳನ್ನು ಬಂಧಿಸಲಿ ಎಂದು ತಾಕೀತು ಮಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಸದನಾಗಿ ಈ ಕಾಮಗಾರಿ ಪೂರ್ಣಗೊಳಿಸಲು ಏನೆಲ್ಲಾ ನೆರವು ನೀಡಬೇಕು ಅದನ್ನೆಲ್ಲ ನೀಡಿದ್ದೇನೆ ಆದರೂ ಪೂರ್ಣ ಆಗಿಲ್ಲ.
ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಸಂಸ್ಥೆ ವಾಹನಗಳು ಎದುರಿಸುತ್ತಿರುವ ಡಿಸೇಲ್ ಅಭಾವ ಎಂದು ಹೇಳಲಾಗಿತ್ತು. ಅದಕ್ಕೆ ಡಿಸೇಲ್ ಸಮಸ್ಯೆ ಪರಿಹರಿಸಿದ್ದು ಮಾತ್ರವಲ್ಲದೇ ಮಣ್ಣು ಹಾಗೂ ಲಾರಿಗಳ ವ್ಯವಸ್ಥೆ ಕೂಡ ಮಾಡಿಕೊಡಲಾಗಿತ್ತು ಎಂದು ಹೇಳಿದ್ದರು. ಆದರೂ ನಿಗದಿತ ಸಮಯಕ್ಕೆ ಸಂಸ್ಥೆ ಅಧಿಕಾರಿಗಳು ಕಾಮಗಾರಿ ಪೂರ್ಣ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೆ ಪಂಪ್ವೆಲ್ ಮೇಲ್ಸೆತುವೆ ಕಾಮಗಾರಿ ಪೂರ್ಣವಾಗಿಸಲು ಕೇಂದ್ರದಲ್ಲಿ 10 ಬಾರಿ ಮೀಟಿಂಗ್ ಮಾಡಿದ್ದೇವೆ ಆದರೂ ಕಾಮಗಾರಿ ಪೂರ್ಣವಾಗಿಲ್ಲ ಎಂದು ಅಧಿಕಾರಿಗಳ ವಿರುದ್ದ ಮಾಧ್ಯಮದೆದರು ಕಿಡಿಕಾರಿದರು. ಆದರೆ ಈ ನಡುವೆ ಸಂಸದ ಸಂಸದ ನಳಿನ್ ಕುಮಾರ್ ಕಟೀಲ್ ಡಿಸೆಂಬರ್ 31 ರಂದು ನೀಡಿದ ಹೇಳಿಕೆ ಬಹಳ ಕುತೂಹಲ ಕೆರಳಿಸಿದೆ. ಪಂಪ್ವೆಲ್ ಪ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ಆರ್ಥಿಕ ಸಂಕಷ್ಟದಲ್ಲಿದ್ದ ನವಯುಗ ಸಂಸ್ಥೆಗೆ ಎಕ್ಸೆಸ್ ಬ್ಯಾಂಕ್ ನಿಂದ 56 ಕೋಟಿ ಸಾಲ ಕೊಡಿಸಿದ್ದೆವೆ . ಅದಕ್ಕೆ ಕೇಂದ್ರ ಸರಕಾರ ಅಡಮಾನ ನಿಂತು ಸಾಲ ಕೊಡಿಸಲಾಗಿದೆ ಎಂದು ಹೇಳಿದ್ದರು.
ಇಲ್ಲಿ ಪ್ರಶ್ನೆ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ನವಯುಗ ಸಂಸ್ಥೆಗೆ 56 ಕೋಟಿ ಸಾಲದ ಅವಶ್ಯಕತೆ ಯಾಕೆ ಬಂತು ಎನ್ನುವುದು ಸಂಸ್ಥೆಯ ಇತ್ತೀಚಿನ ವ್ಯವಹಾರದ ಬಗ್ಗೆ ದೃಷ್ಠಿ ಹಾಯಿಸಿದರೆ ಸಂಸ್ಥೆ ಕೈಯಲ್ಲಿ 28 ಸಾವಿರ ಕೋಟಿ ರೂಪಾಯಿ ಕಾಮಗಾರಿ ನಡೆಸುತ್ತಿದೆ.
ಮುಂಬಯಿ – ಪುಣೆ ಎಕ್ಸಪ್ರೆಸ್ ಹೈವೆ, ಬೊಂಜುರ್- ಮೆಕಾ ಸಂಪರ್ಕಿಸುವ ದಿಬಾಂಗ್ ಸೇತುವೆ ನಿರ್ಮಾಣ, ದೋಲಾ- ಸಾದಿಯಾ ಸೇತುವೆ ಕುಂದಾಪುರ – ಸುರತ್ಕಲ್ ಮತ್ತು ಮಂಗಳೂರು – ಕೇರಳ ಗಡಿವರೆಗೆ ಚತುಷ್ಪತ ರಸ್ತೆ ,ಗಂಗಾ ಪಾತ್ ರಸ್ತೆ ಹೀಗೆ ಸಂಸ್ಥೆ ಗುತ್ತಿಗೆ ಪಡೆದುಕೊಂಡ ಕಾಮಗಾರಿಗಳ ಲಿಸ್ಟ್ ದೊಡ್ಡದಿದೆ. ಸಂಸ್ಥೆಯ ಅಧಿಕೃತ ವೆಬ್ ಸೈಟ್ ನ ಪ್ರಕಾರ ಒಟ್ಟು 28 ಸಾವಿರ ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಸಂಸ್ಥೆ ಹೊಂದಿದೆ.
ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುವ, ಆರ್ಥಿಕವಾಗಿ ಸದೃಢವಾಗಿರುವ ಸಂಸ್ಥೆಗೆ ನಳಿನ್ ಕುಮಾರ್ ಕಟೀಲ್ 56 ಕೋಟಿ ರೂಪಾಯಿ ಸಾಲ ಕೊಡಿಸಿದಿದ್ದಾದರೂ ಏಕೆ..? ಎನ್ನುವ ಪ್ರಶ್ನೆ ಮೂಡಲಾರಂಭಿಸಿದೆ.
ಕಳೆದ ಹಲವಾರು ತಿಂಗಳುಗಳಿಂದ ಪಂಪ್ವೆಲ್ ಪ್ಲೈಓವರ್ ಕಾಮಗಾರಿ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ನೀಡಿರುವ ಹಲವಾರು ಹೇಳಿಕೆಗಳು ಸಮಯಕ್ಕೆ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಾ ಹೋಗಿವೆ. ಒಂದಕ್ಕೊಂದು ತಾಳೆ ಬರುತ್ತಿಲ್ಲ ಎನ್ನುವುದು ಸ್ಪಷ್ಟ. ಹೀಗಿರುವಾಗ ಜನರಲ್ಲಿ ಮೂಡುತ್ತಿರುವ ಹಲವಾರು ಪ್ರಶ್ನೆಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಉತ್ತರ ನೀಡಬೇಕಾದ ಅನಿವಾರ್ಯತೆ ಇದೆ. ಅಥವಾ ಈ ಪಂಪ್ವೆಲ್ ಮೇಲ್ಸೆತುವೆ ಕಾಮಗಾರಿಯಲ್ಲಿ ನಡೆದಿರಬಹುದಾದ ಭಾರಿ ಭ್ರಷ್ಟಾಚಾರದ ಬಗ್ಗೆ ಕೇಂದ್ರ ಸಚಿವ ನಿತೀನ್ ಗಡ್ಕರಿ ತನಿಖೆ ನಡೆಸಲು ಆದೇಶಿಸಬೇಕು ಎನ್ನುವುದು ಮಂಗಳೂರಿಗರ ಒಕ್ಕೊರಲ ಒತ್ತಾಯವಾಗಿದೆ.