LATEST NEWS
ಗೆಳತಿಯ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಹೋಗಿ ಪೋಲಿಸ್ ಅತಿಥಿಯಾದ!

ಲಕ್ನೋ, ಜನವರಿ 13: ಆನ್ಲೈನ್ನಲ್ಲಿ ಪರಿಚಯವಾದ ಗೆಳತಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ಖರೀದಿಸಿ ಬೆಂಗಳೂರಿನಿಂದ ಲಕ್ನೋಗೆ ತೆರಳಿದ ಯುವಕನಿಗೆ ಪೊಲೀಸರೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
21 ವರ್ಷದ ಯುವಕ ಸಸಲ್ಮಾನ್ ಗೆ ಆನ್ಲೈನ್ನಲ್ಲಿ ಅಪ್ರಾಪ್ತ ಹುಡುಗಿಯ ಪರಿಚಯವಾಗಿತ್ತು. ಆಕೆ ಲಕ್ನೋದ ಹುಡುಗಿ. ಬರೀ ಫೋನ್, ಮೆಸೇಜ್ಗಳ ಮೂಲಕ ಇವರ ಗೆಳೆತನ ಸಾಗಿತ್ತು. ಒಂದು ಬಾರಿಯೂ ಭೇಟಿಯಾಗಿರಲಿಲ್ಲ. ಹೀಗಿರುವಾಗ ಗೆಳತಿಯ ಹುಟ್ಟುಹಬ್ಬ ಇದೆ ಎಂದು ತಿಳಿದ ಬೆಂಗಳೂರಿನ ಯುವಕ ಆಕೆಯನ್ನು ಭೇಟಿ ಮಾಡಲು ನಿರ್ಧರಿಸಿದ್ದ. ಹೀಗಾಗಿ ತನ್ನ ಗೆಳತಿಗೆ ಬರ್ತ್ಡೇ ಗಿಫ್ಟ್ ಖರೀದಿಸಿ ಬೆಂಗಳೂರಿನಿಂದ ಲಕ್ನೋಗೆ ತೆರಳಲು ಮುಂದಾಗಿದ್ದ.

ಅಂತೆಯೇ ಬೆಂಗಳೂರಿನಿಂದ ವಿಮಾನ ಟಿಕೆಟ್ ಬುಕ್ ಮಾಡಿ, ಸುಮಾರು 2000 ಕಿ.ಮೀ.ದೂರವಿರುವ ಲಕ್ನೋಗೆ ಗಿಫ್ಟ್ ಜೊತೆ ತೆರಳಿದ್ದ.
ಗೆಳತಿಯನ್ನು ಭೇಟಿ ಮಾಡಿ ಗಿಫ್ಟ್ ಕೊಟ್ಟು ಹುಟ್ಟುಹಬ್ಬದ ಶುಭಾಶಯ ತಿಳಿಸಲು ಕಾತರದಿಂದ ಕಾಯುತ್ತಿದ್ದ. ಲಕ್ನೋಗೆ ತೆರಳಿದ ಆತ, ಸರಿಯಾದ ಸಮಯಕ್ಕೆ ವಿಶ್ ಮಾಡಲು ಅಲ್ಲಿಂದ ಲಕ್ಕಿಂಪುರ ಖೇರಿಗೆ ಬಸ್ ಹಿಡಿದ. ಬಹಳ ಕಾತುರದಿಂದ ಹೋದ ಆತನಿಗೆ ಆ ಹುಡುಗಿಯ ಮನೆಯಲ್ಲಿ ಸಿಕ್ಕ ಉಡುಗೊರೆ ನಿರಾಸೆ. ಯಾಕೆಂದರೆ ಆತನ ಗೆಳತಿ ಮನೆಯವರು ಈತ ಅಪರಿಚಿತ ಎಂದು ಮನೆಯೊಳಗೆ ಕರೆಯಲು ನಿರಾಕರಿಸಿದರು. ಆತ ಎಷ್ಟೇ ಬೇಡಿಕೊಂಡರೂ ಸಹ ಹುಡುಗಿ ಮನೆಯವರು ಸುತಾರಾಂ ಒಪ್ಪಲಿಲ್ಲ. ಗೆಳತಿಯ ಬರ್ತ್ಡೇ ಗೆ ಚಾಕೋಲೇಟ್ಸ್, ಟೆಡ್ಡಿ ಬೇರ್ ಹಾಗೂ ಇನ್ನಿತರೆ ಗಿಫ್ಟ್ಗಳನ್ನು ಆತ ತಂದಿದ್ದ. ಆದರೆ ಈ ಗಿಫ್ಟ್ ಕೊಡುವುದಿರಲಿ, ಆತನಿಗೆ ಗೆಳತಿಯನ್ನು ಭೇಟಿ ಮಾಡುವ ಅವಕಾಶವೂ ಸಿಗಲಿಲ್ಲ.
ಅಪ್ರಾಪ್ತೆ ಮನೆಯವರು ಈತನ ಮೇಲೆ ಅನುಮಾನಗೊಂಡು, ಪೊಲೀಸರಿಗೆ ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸಲ್ಮಾನ್ನ್ನು ಪೊಲೀಸ್ ಸ್ಟೇಷನ್ಗೆ ಕರೆದೊಯ್ದರು. ಹೀಗಾಗಿ ಇಡೀ ರಾತ್ರಿ ಆತ ಜೈಲಿನಲ್ಲೇ ಕಾಲ ಕಳೆದನು. ಗೆಳತಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬಂದಾತ, ಪೊಲೀಸರಿಗೆ ಅತಿಥಿಯಾಗಿದ್ದು ವಿಪರ್ಯಾಸವೇ ಸರಿ.
ಸಲ್ಮಾನ್ಮ ಮೂಲತಃ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯವನಾಗಿದ್ದು, ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.ಹುಡುಗಿಯು ಆನ್ಲೈನ್ ಮೂಲಕ ಪರಿಚಯವಾಗಿ ನಮ್ಮಿಬ್ಬರ ನಡುವೆ ಗೆಳೆತನ ಬೆಳೆಯಿತು. ಆಕೆಯ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ನಾನು ಗಿಫ್ಟ್ ಖರೀದಿಸಿ ಬೆಂಗಳೂರಿನಿಂದ ಲಕ್ನೋಗೆ ತೆರಳಿದ್ದೆ ಎಂದು ಸಲ್ಮಾನ್ ಪೊಲೀಸರ ಬಳಿ ಹೇಳಿದ್ದಾನೆ. ಆದರೆ ಹುಡುಗಿಯ ಪೋಷಕರು ಈತನ ಮೇಲೆ ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಲಕ್ನೋದಿಂದ ಬೆಂಗಳೂರಿಗೆ ಮರಳಲು ಜನವರಿ 11ಕ್ಕೆ ಬುಕ್ ಆಗಿರುವ ಟಿಕೆಟ್ ಹಾಗೂ ಹಣ ಆತನ ಬಳಿ ಇತ್ತು. ಹುಡುಗಿಯ ಪೋಷಕರು ಯುವಕನ ಮೇಲೆ ಕೋಪಗೊಂಡು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು.
ಹುಡುಗಿಯ ಮನೆಯವರು ಯುವಕನ ವಿರುದ್ಧ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಯುವಕನ ವಿರುದ್ಧ ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಬಾಂಡ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಯಿತು ಎಂದು ಸಿಂಗ್ ಹೇಳಿದರು.