LATEST NEWS
ಉಡುಪಿ ಕೃಷ್ಣ ಮಠದ ಆವರಣದಲ್ಲಿ ವೆಡ್ಡಿಂಗ್ ಶೂಟ್ ಬ್ಯಾನ್

ಉಡುಪಿ, ಏಪ್ರಿಲ್ 10: ಉಡುಪಿ ಶ್ರೀಕೃಷ್ಣ ಮಠದ ಆವರಣದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಹೆಚ್ಚಾದ ಕಾರಣ ಇದೀಗ ಕೃಷ್ಣ ಮಠದ ರಥ ಬೀದಿಯ ಆವರಣದಲ್ಲಿ ಪ್ರಿ ವೆಡ್ಡಿಂಗ್ ಹಾಗು ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ನಿಷೇಧಿಸಿ ಪರ್ಯಾಯ ಪುತ್ತಿಗೆ ಮಠ ಪ್ರಕಟಣೆ ಹೊರಡಿಸಿದೆ.
ಇತ್ತೀಚೆಗೆ ಉಡುಪಿ ಕೃಷ್ಣ ಮಠದ ರಥಬೀದಿ ಆವರಣದಲ್ಲಿ ಪ್ರಿ ಮತ್ತು ಪೋಸ್ಟ್ ವೆಡ್ಡಿಂಗ್ ಶೂಟಿಂಗ್ ಹೆಚ್ಚಾಗಿ ನಡೆಯುತ್ತಿತ್ತು, ಅಲ್ಲದೆ ಪ್ರಿ ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಬೆಳ್ಳಂಬೆಳ್ಳಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣಿಸುತ್ತಿದೆ. ಕೇರಳ ಹಾಗೂ ರಾಜ್ಯದ ವಿವಿದ ಕಡೆಗಳಿಂದ ಬರುವ ಜೋಡಿಗಳು ಕೃಷ್ಣ ಮಠದ ಆವರಣದಲ್ಲಿ ವೆಡ್ಡಿಂಗ್ ಶೂಟಿಂಗ್ ಮಾಡಿಸುತ್ತಿದ್ದಾರೆ. ಅಲ್ಲದೆ ಫೋಟೋಗ್ರಾಫರ್ಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.

ಅಷ್ಟಮಠಾಧೀಶರು ಓಡಾಡುವ ರಥಬೀದಿ ಇದಾಗಿದೆ. ನೂರಾರು ವರ್ಷಗಳಿಂದ ಯತಿಗಳು, ದಾಸರು ನಡೆದಾಡಿದ ಬೀದಿ ಇದಾಗಿದೆ. ಇದಕ್ಕೆ ಪಾವಿತ್ರ್ಯವಿದೆ. ಪ್ರತಿ ದಿನ ರಥ ಬೀದಿಯಲ್ಲಿ ಉತ್ಸವ ನಡೆಯುತ್ತದೆ. ಅಷ್ಟೇ ಅಲ್ಲದೆ ಇದು, ಅಷ್ಟಮಠಗಳು ಇರುವ ರಥಬೀದಿಯಾಗಿದೆ. ಇಲ್ಲಿ ಜೋಡಿಹಕ್ಕಿಗಳು ಸರಸ ಸಲ್ಲಾಪ ನಡೆಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ಧಾರ್ಮಿಕ ವಾತಾವರಣಕ್ಕೆ ಅಡ್ಡಿ ಆಗುತ್ತದೆ. ಹೀಗಾಗಿ ಮುಜುಗರದ ಸನ್ನಿವೇಶ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಠ ತಿಳಿಸಿದೆ.