DAKSHINA KANNADA
ನೇತ್ರಾವತಿ ನದಿ ಗರ್ಭದಲ್ಲಿ ನಡೆಯುವ ಮಖೆ ಜಾತ್ರೆಯ ಆಚರಣೆಗೆ ಜಲಕಂಟಕ – ಕೃಷಿಗಾಗಿ ಧಾರ್ಮಿಕ ಆಚರಣೆಯನ್ನು ತ್ಯಾಗ ಮಾಡಿದ ಭಕ್ತರು….
ಉಪ್ಪಿನಂಗಡಿ ಫೆಬ್ರವರಿ 27: ದಕ್ಷಿಣ ಕಾಶಿಯೆಂದೇ ಪ್ರಸಿದ್ದಿ ಪಡೆದಿರುವ ಸಂಗಮ ತಾಣ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ವರ್ಷಕ್ಕೊಮ್ಮೆ ನೇತ್ರಾವತಿ ನದಿ ಗರ್ಭದಲ್ಲಿ ನಡೆಯುವ ಮಖೆ ಜಾತ್ರೆಯ ಆಚರಣೆಗೆ ಜಲಕಂಟಕ ಎದುರಾಗಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿರುವ ಆಚರಣೆಗೆ ವಿಘ್ನ ಉಂಟಾಗಿದೆ.
ಶತಮಾನಗಳ ಬಳಿಕ ಜಲ ಸಮೃದ್ಧಿ ಈ ಬಾರಿ ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ಹರಿಯುವ ಕುಮಾರಧಾರಾ ಮತ್ತು ನೇತ್ರಾವತಿ ನದಿಯಲ್ಲಿ ಕಂಡು ಬಂದಿದ್ದು, ಮಹಾದೇವನ ಉದ್ದವಲಿಂಗ ನದಿ ಗರ್ಭದಲ್ಲಿ ಸನ್ನಿಹಿತಗೊಂಡ ಕಾರಣ ತಿಂಗಳ ಪರ್ಯಂತ ನಡೆಯುವ 3 ಮುಸೂಟಗಳಲ್ಲಿ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಿ, ಅಭಿಷೇಕ ಮಾಡುವ ಅವಕಾಶ ಇಲ್ಲದಾಗಿದೆ. ತಲೆಮಾರುಗಳ ಇತಿಹಾಸ ದಲ್ಲಿ ಇಂಥದೊಂದು ವಿದ್ಯಮಾನ ಇದೇ ಮೊದಲ ಬಾರಿ ಸಂಭವಿಸಿದೆ.ನೇತ್ರಾವತಿ ನದಿಗೆ ಉಪ್ಪಿನಂಗಡಿ ಯಿಂದ ಕೆಳಭಾಗದ ಬಂಟ್ವಾಳ ತಾಲೂಕಿನ ಬಿಳಿಯೂರು ಸಮೀಪ ಹೊಸ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಈ ಅಣೆಕಟ್ಟಿನಲ್ಲಿ ಇದೀಗ ನೀರು ಶೇಖರಿಸಲಾಗುತ್ತಿರುವ ಕಾರಣ, ಹಿನ್ನೀರು ಡ್ಯಾಂ ನಿಂದ ಸುಮಾರು 8 ಕಿಲೋಮೀಟರ್ ದೂರದವರೆಗೂ ನದಿಯಲ್ಲಿ ನಿಂತಿದೆ. ಈ ಜಲಸಮೃದ್ಧಿಯಿಂದ ಊರಿಗೆ ಕ್ಷೇಮ ವಾಗಿದ್ದು, ನದಿ ದಡದ ರೈತರಲ್ಲಿ ಮಂದಹಾಸ ಮೂಡಿದೆ. ಮೈಲುದ್ದಕ್ಕೂ ಅಂತರ್ಜಲ ವೃದ್ಧಿಯಾಗಿ ದ್ದಲ್ಲದೆ, ಬೇಸಿಗೆಯಲ್ಲೂ ಭರ್ಜರಿ ನೀರು ಕಂಡು ಜನ ಪುಳಕಿತರಾಗುತ್ತಿದ್ದಾರೆ. ಯಾರೂ ಕೂಡ ಬೇಸಿಗೆಯಲ್ಲಿ ಉಪ್ಪಿನಂಗಡಿ ಸಂಗಮದಲ್ಲಿ ಈ ಪರಿಯ ನೀರು ಇದುವರೆಗೆ ಕಂಡಿದ್ದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ಶ್ರೀ ಸಹಸ್ರಲಿಂಗೇಶ್ವರ ದೇವಳದ ಪಕ್ಕದಲ್ಲಿ, ನೇತ್ರಾವತಿಯ ಮರಳಿನಲ್ಲಿ ಶ್ರೀ ದೇವರ ಮೂಲ ಉದ್ಭವ ಲಿಂಗವಿದೆ. ವಾರ್ಷಿಕ ಜಾತ್ರೆ ಸಂದರ್ಭ ಮರಳು ಸರಿಸಿ ಪೂಜೆ ಮಾಡಲಾಗುತ್ತದೆ. 3 ವಾರ ಕಾಲ ನಡೆಯುವ ಉಬಾರ್ ಜಾತ್ರೆಯಲ್ಲಿ 3 ಮಖೆ ಕೂಟಗಳು ಬರುತ್ತವೆ. ಹುಣ್ಣಿಮೆ ಮಖೆ, ಅಷ್ಟಮಿ ಮಖೆ ಮತ್ತು ಮಹಾಶಿವರಾತ್ರಿ ಮಖೆ ಇದಾಗಿದೆ. ಈ ವೇಳೆ ಉದ್ಭವ ಲಿಂಗಕ್ಕೆ ಪೂಜೆ, ಅಭಿಷೇಕ, ಅರ್ಥ್ಯ ಪ್ರದಾನ, ನೈವೇದ್ಯ ಸಮರ್ಪಣೆ ನಡೆಯು ಇದೆ. ಭಕ್ತರು ತೀರ್ಥ ಸ್ನಾನ ಮಾಡಿ, ಸರತಿ ಸಾಲಿನಲ್ಲಿ ಬಂದು ಉದ್ಭವ ಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಶತಮಾನ ಗಳಿಂದಲೂ ಈ ಸಂಪ್ರದಾಯ ನಡೆದು ಬಂದಿದೆ. ಈ ಬಾರಿ ಫೆ.21 ರಿಂದ ಶಿವರಾತ್ರಿಯವರೆಗೆ 3 ಮಖೆ ಕೂಟ ನಡೆಯಲಿದ್ದು, ಉದ್ದವಲಿಂಗಕ್ಕೆ ಪೂಜೆ ಸಲ್ಲಿಸಲಾಗದ ಸ್ಥಿತಿ ನಿರ್ಮಾಣವಾಗಿದೆ.
ಇತಿಹಾಸದಲ್ಲೇ ಮೊದಲ ಬಾರಿ ಉದ್ಭವಲಿಂಗ ಪೂಜೆ ನಡೆಸಲಾಗದಿರುವ ಹಿನ್ನೆಲೆಯಲ್ಲಿ ಶುಕ್ರವಾರ ದೇವಳದಲ್ಲಿ ಅನುಜ್ಞಾಕಲಶ ಮಾಡಿ ಪ್ರಾರ್ಥನೆ ಮಾಡಲಾಗಿದೆ. ಕನಿಷ್ಠ ಪಕ್ಷ ಮಹಾಶಿವರಾತ್ರಿಯಂದು ನಡೆಯುವ ಕೊನೆಯ ಮಖೆ ಕೂಟದಲ್ಲಾದರೂ ಉದ್ಭವ ಲಿಂಗಕ್ಕೆ ಅರ್ಥ್ಯ ಪ್ರದಾನ, ನೈವೇದ್ಯ ಸಮರ್ಪಣೆ, ಪೂಜೆ ಮಾಡಲು ಅವಕಾಶ ಸಿಕ್ಕಿದರೆ ಉತ್ತಮ ಎಂಬ ಭಾವನೆ ಇದೆ. ಇದಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ಸರಕಾರಕ್ಕೆ ಮನವಿ ಮಾಡಲಾಗಿದೆ. ಸಾಧ್ಯವಾಗದೇ ಹೋದರೆ ಮಳೆಗಾಲದ ಪದ್ಧತಿಯನ್ನೇ ಮಖೆ ಸಂದರ್ಭದಲ್ಲೂ ಮಾಡಬೇಕಾಗುತ್ತದೆ. ನದಿ ಬದಿಯಲ್ಲೇ ನಿಂತು ಉದ್ದವ ಲಿಂಗಕ್ಕೆ ಮಾನಸ ಪೂಜೆ ಸಲ್ಲಿಸುವುದು ಅನಿವಾರ್ಯವಾಗಲಿದೆ ಎನ್ನುವ ವಿಚಾರವೂ ಇದೀಗ ಚರ್ಚೆಯಲ್ಲಿದೆ.
ಉಡುಪಿಯ ಜ್ಯೋತಿಷ್ಯಶಾಸ್ತ್ರ ಪಂಡಿತರಾದ ಗೋಪಾಲಕೃಷ್ಣ ಜೋಯಿಸರ ನೇತೃತ್ವದಲ್ಲಿ ಫೆ. 9 ರಂದು ದೇವಳದಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗಿದೆ. ನದಿಯಲ್ಲಿರುವ ಲಿಂಗವೇ ದೇವರ ಮೂಲ ಸಾನಿಧ್ಯವಾಗಿದೆ. ಅದು ನದಿಯಲ್ಲಿರುವ ಕಾರಣ ವರ್ಷಪೂರ್ತಿ ಪೂಜೆ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನದಿ ಬದಿಯಲ್ಲಿ ಹಿಂದೆ ಪ್ರತ್ಯೇಕ ದೇವಳ ಕಟ್ಟಿರಬೇಕು. ಆದರೂ ನದಿಯಲ್ಲಿರುವ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸುವುದು ಕಡ್ಡಾಯ. ಇದಕ್ಕಾಗಿ ಸರಕಾರದ ಅನುಮತಿ ಪಡೆಯುವುದು ಉತ್ತಮ ಎಂದು ಪ್ರಶ್ನೆಯಲ್ಲಿ ಕಂಡು ಬಂದಿದೆ.
ಉಪ್ಪಿನಂಗಡಿ ಸಂಗಮದಲ್ಲಿ ಇನ್ನೊಂದು ಹೊಸ ಕಿಂಡಿ ಅಣೆಕಟ್ಟು ನಿರ್ಮಿಸುವುದು, ಉದ್ಭವ ಲಿಂಗ ಇರುವ ಜಾಗದಲ್ಲಿ ಕೂಡಲಸಂಗಮ ಕ್ಷೇತ್ರದ ಮಾದರಿಯಲ್ಲಿ ಗೋಳಾಕಾರದ ಮಂದಿರ ನಿರ್ಮಿಸುವುದು, ಅಲ್ಲಿಗೆ ಹೋಗಿ ಬರಲು ಸೇತುವೆ ಹಾದಿ ನಿರ್ಮಿಸುವುದು, ಭಕ್ತರು ಗೋಳಾಕಾರ ಮಂದಿರದೊಳಗೆ ವೃತ್ತಾಕಾರದ ಮೆಟ್ಟಿಲುಗಳಲ್ಲಿ ಇಳಿದು ಹೋಗಿ ಪೂಜೆ ಮಾಡುವುದು. ಇಂಥದೊಂದು ಪ್ರಸ್ತಾವನೆ ತಯಾರಾಗಿದ್ದು ಸರಕಾರಕ್ಕೆ ಶಾಸಕ ಅಶೋಕ್ ರೈ ಸಲ್ಲಿಸಿದ್ದಾರೆ. ಇದು ಕಾರ್ಯರೂಪಕ್ಕೆ ಬಂದರೆ ಭವಿಷ್ಯದಲ್ಲಿ ಉದ್ಭವಲಿಂಗ ಪೂಜೆ ಅಬಾಧಿತವಾಗಲಿದೆ. ಆದರೆ ಸದ್ಯದ ಮಟ್ಟಿಗೆ ಭಕ್ತರು ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಆಚರಣೆಯನ್ನು ಕೃಷಿಗಾಗಿ, ನಾಡಿನ ಸಮೃದ್ಧಿಗಾಗಿ ಮನಸ್ಸಿಲ್ಲದ ಮನಸ್ಸಿನಲ್ಲಿ ತ್ಯಾಗ ಮಾಡುವ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.