DAKSHINA KANNADA
‘ಅಯೋಧ್ಯೆ ರಾಮಮಂದಿರದ ಆಹ್ವಾನ ಸ್ವೀಕರಿಸಿದ್ದಕ್ಕೆ ಐಶ್ವರ್ಯ ರೈ ಮೇಲೆ ಸೇಡು ತೀರಿಸಿದ ರಾಹುಲ್ ಗಾಂಧಿ’ : ಶಾಸಕ ಕಾಮತ್
ಮಂಗಳೂರು : ಒಂದು ಕಾಲದಲ್ಲಿ ಇಡೀ ದೇಶಕ್ಕೆ ಕೀರ್ತಿ ತಂದಿದ್ದ ಮಾಜಿ ವಿಶ್ವ ಸುಂದರಿ, ನಮ್ಮ ಮಂಗಳೂರಿನ ಬಂಟ ಸಮುದಾಯದ ಹೆಮ್ಮೆಯ ಮಗಳು ಐಶ್ವರ್ಯ ರೈ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ರಾಹುಲ್ ಗಾಂಧಿಯವರು ಬಾಲಿಶ ಹೇಳಿಕೆಗಳಲ್ಲಿ ತನ್ನನ್ನು ಮೀರಿಸುವವರು ಯಾರೂ ಇಲ್ಲ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ತನ್ನ ಸ್ವಂತ ಪರಿಶ್ರಮದಿಂದಲೇ ವಿಶ್ವ ಸುಂದರಿಯಂತಹ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಇಡೀ ವಿಶ್ವವನ್ನು ಗೆದ್ದಂತಹ ಸಾಧನೆ ಮಾಡಿರುವ ಅವರಿಗೆ ಯಾವುದೇ ಒಂದಂಶದಲ್ಲಿಯೂ ಸರಿಸಾಟಿಯಾಗದ ಕೇವಲ ಕುಟುಂಬದ ಹಿನ್ನಲೆಯಿಂದ ಬಂದಿರುವ ರಾಹುಲ್ ಗಾಂಧಿಯಂತಹವರು ಹಗುರವಾಗಿ ಮಾತನಾಡುವುದು ಸ್ವಯಂ ಮೂರ್ಖತನದ ಪರಮಾವಧಿ ಅಷ್ಟೇ ಎಂದು ಹೇಳಿದರು.
ಅಯೋಧ್ಯೆ ರಾಮಮಂದಿರದ ಆಹ್ವಾನವನ್ನು ಸ್ವೀಕರಿಸಿದ್ದ ಕಾರಣಕ್ಕೆ ಐಶ್ವರ್ಯ ರೈ ಅವರ ಬಗ್ಗೆ ಅವಹೇಳನ ಮಾಡಿದ ರಾಹುಲ್ ಗಾಂಧಿ, ಸ್ವಾಭಿಮಾನವನ್ನೇ ಉಸಿರಾಡುವ ಬಂಟ ಸಮುದಾಯವನ್ನು, ಜಾಗತಿಕ ಮಟ್ಟದಲ್ಲಿ ಮಹತ್ತರ ಸಾಧನೆಗೈಯುತ್ತಿರುವ ಮಹಿಳೆಯರನ್ನು, ಕಲೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಕಲಾವಿದರನ್ನು ಅವಮಾನಿಸಿದಂತಾಗಿದೆ. ಹಾಗಾಗಿಯೇ ಈ ಎಲ್ಲಾ ವರ್ಗಗಳೂ ಸೇರಿದಂತೆ ಇಡೀ ದೇಶವೇ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಐಶ್ವರ್ಯ ರೈ ಯವರ ಪರ ನಿಂತಿದೆ.
ಆದರೆ ಎಂದಿನಂತೆ ರಾಜ್ಯದ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಅತ್ಯುನ್ನತ ನಾಯಕನ ಬಾಲಿಶ ಹೇಳಿಕೆಗಳನ್ನು ಸಮರ್ಥಿಸಲೂ ಆಗದೇ, ಇತ್ತ ವಿರೋಧಿಸಲೂ ಆಗದೇ ಗಾಢಮೌನಕ್ಕೆ ಶರಣಾಗಿ ತಮ್ಮ ಗುಲಾಮೀ ಮಾನಸಿಕತೆಯನ್ನು ಜನತೆ ಮುಂದೆ ಪ್ರದರ್ಶಿಸಿರುವುದು ನಾಚಿಕೆಗೇಡು ಎಂದು ಶಾಸಕರು ಹೇಳಿದರು.
You must be logged in to post a comment Login