Connect with us

    LATEST NEWS

    ಎತ್ತಿನಹೊಳೆ ಯೋಜನೆ ಎಫೆಕ್ಟ್ ಸಂಪೂರ್ಣ ಕಲುಷಿತ ಗೊಂಡ ನದಿ ನೀರಿನ ಮೂಲ

    ಎತ್ತಿನಹೊಳೆ ಯೋಜನೆ ಎಫೆಕ್ಟ್ ಸಂಪೂರ್ಣ ಕಲುಷಿತ ಗೊಂಡ ನದಿ ನೀರಿನ ಮೂಲ

    ಪುತ್ತೂರು ಮೇ 16: ಉತ್ತರ ಕರ್ನಾಟಕದ ಭಾಗಗಳಿಗೆ ನೀರು ಪೂರೈಕೆ ಮಾಡುವ ರಾಜ್ಯ ಸರಕಾರದ ಎತ್ತಿನಹೊಳೆ ಯೊಜನೆ ಆ ಭಾಗಗಳಿಗೆ ಸಾಗುವ ಮೊದಲೇ ಕರಾವಳಿ ಭಾಗಗಳಲ್ಲಿ ಯೋಜನೆಯ ದುಷ್ಪರಿಣಾಮಗಳು ಕಾಣಲಾರಂಭಿಸಿದೆ.

    ಯೋಜನೆಯ ಅನುಷ್ಟಾನದಿಂದ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ಬೇಸಿಗೆ ಕಾಲದಲ್ಲಿ ನೀರಿನ ತೊಂದರೆಯಾಗಲಿದೆ ಎನ್ನುವ ಅಂಶ ಈಗಾಗಲೇ ಸಾಬೀತಾಗಿದೆ. ಇದರ ಜೊತೆಗೇ ಯೋಜನೆಯ ಕಾಮಗಾರಿಯಿಂದಾಗಿ ದಕ್ಷಿಣಕನ್ನಡ ಜಿಲ್ಲೆಗೆ ಹರಿಯುವ ನೀರೂ ಕೂಡಾ ಕಲುಷಿತಗೊಳ್ಳಲಾರಂಭಿಸಿದೆ.

    ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಮೂಲವಾದ ಕೆಂಪುಹೊಳೆ ಹಾಗೂ ಗುಂಡ್ಯಾ ಹೊಳೆ ಇದೀಗ ಸಂಪೂರ್ಣ ಕಲುಷಿತಗೊಂಡಿದ್ದು, ಈ ನೀರನ್ನೇ ತನ್ನ ಎಲ್ಲಾ ಕಾರ್ಯಗಳಿಗೆ ಬಳಸುತ್ತಿದ್ದ ಗುಂಡ್ಯಾ ಭಾಗದ ಜನ ಇದೀಗ ಶುದ್ಧ ನೀರಿಲ್ಲದೆ ಪರಿತಪಿಸುವಂತಾಗಿದೆ.

    ಉತ್ತರ ಕರ್ನಾಟಕದ ಕೆಲವು ಭಾಗಗಳಿಗೆ ನೀರು ಪೂರೈಸುವ ಉದ್ಧೇಶದಿಂದ ರಾಜ್ಯ ಸರಕಾರ ಹಮ್ಮಿಕೊಂಡ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ಶೇಖರಿಸುವ ಮೂಲಕ ಆ ನೀರನ್ನು ಉತ್ತರ ಕರ್ನಾಟಕಕ್ಕೆ ಸಾಗಿಸುವ ಯೋಜನೆ ಸರಕಾರದ್ದಾಗಿದೆ. ಈ ಕಾರಣಕ್ಕಾಗಿ ಘಟ್ಟ ಪ್ರದೇಶಗಳನ್ನು ಅಗೆದು ಪೈಪ್ ಲೈನ್ ಗಳನ್ನು ಅಳವಡಿಸುವ ಕಾಮಗಾರಿಯೂ ಬಹುತೇಕ ಮುಗಿದಿದೆ.

    ಎತ್ತಿನಹೊಳೆ ಯೋಜನೆ ಅನುಷ್ಟಾನಕ್ಕೆ ಬಂದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ನೀರಿನ ತೊಂದರೆಯಾಗಲಿದೆ ಎನ್ನುವ ತಜ್ಞರ ಅಭಿಪ್ರಾಯಗಳು ಇದೀಗ ಸತ್ಯವಾಗತೊಡಗಿದೆ. ಜಿಲ್ಲೆಯ ನೇತ್ರಾವತಿ, ಕುಮಾರಧಾರ ನದಿಗಳು ಇದೀಗ ಸಂಪೂರ್ಣ ಹರಿವು ನಿಲ್ಲಿಸಿದೆ. ಈ ನದಿಗಳ ಮೂಲ ನದಿಗಳಾದ ಗುಂಡ್ಯಾ ಹೊಳೆ ಹಾಗೂ ಕೆಂಪುಹೊಳೆಯಲ್ಲಿರುವ ಅಲ್ಪಸ್ವಲ್ಪ ನೀರೂ ಕೂಡಾ ಇದೀಗ ಕಲುಷಿತಗೊಂಡಿದೆ.
    ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಿದ ಹಿನ್ನಲೆಯಲ್ಲಿ ಅಲ್ಲಿನ ಹೂಳು, ಮರಳು, ಮಣ್ಣು ಇದೀಗ ಜಲ ವಿದ್ಯುತ್ ಘಟಕಗಳ ಡ್ಯಾಂಗಳಲ್ಲಿ ಸಂಗ್ರಹವಾಗಿ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಅದೇ ನೀರು ಇದೀಗ ಎರಡೂ ಹೊಳೆಗಳಲ್ಲಿ ಹರಿಯುತ್ತಿದ್ದು, ಗುಂಡ್ಯಾ, ಕಡಬ ಹಾಗೂ ಇತರ ಪ್ರದೇಶಗಳ ಜನರಿಗೆ ಶುದ್ಧ ನೀರಿನ ಕೊರತೆ ಎದುರಾಗಿದೆ.

    ಈ ಬಗ್ಗೆ ಈಗಾಗಲೇ ಸ್ಥಳೀಯರು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಜಲ ವಿದ್ಯುತ್ ಘಟಕದ ಅಧಿಕಾರಿಗಳ ಗಮನವನ್ನೂ ಸೆಳೆದಿದ್ದಾರೆ. ಆದರೆ ನೀರು ಕಲುಷಿತಗೊಳ್ಳಲು ಘಟಕಗಳು ಕಾರಣವಲ್ಲ, ಬದಲಾಗಿ ಎತ್ತಿನಹೊಳೆ ಯೋಜನೆಯ ಕಾಮಗಾರಿಯೇ ಕಾರಣ ಎನ್ನುವ ಸ್ಪಷ್ಟನೆಯನ್ನೂ ಘಟಕದ ಅಧಿಕಾರಿಗಳು ನೀಡಿದ್ದಾರೆ. ಆದರೆ ಮಾಧ್ಯಮದ ಮೂಲಕ ನೇರವಾಗಿ ಈ ವಿಚಾರವನ್ನು ತಿಳಿಸಲು ಹಿಂದೇಟು ಹಾಕಿದ್ದಾರೆ.

    ಒಂದು ವೇಳೆ ಎತ್ತಿನಹೊಳೆ ವಿರುದ್ಧ ಮಾತಾಡಿದಲ್ಲಿ ತಮ್ಮ ಅಸ್ತಿತ್ವಕ್ಕೆ ತೊಂದರೆಯಾಗಬಹುದು ಎನ್ನುವ ಆತಂಕವನ್ನೂ ಈ ಘಟಕದ ಸಿಬ್ಬಂದಿಗಳು ವ್ಯಕ್ತಪಡಿಸಿದ್ದಾರೆ. ಒಂದೆಡೆ ಎತ್ತಿನಹೊಳೆಯಿಂದ ದಕ್ಷಿಣಕನ್ನಡ ಜಿಲ್ಲೆಯ ಎರಡು ಜೀವನದಿಗಳು ಬತ್ತಿ ಹೋಗಿದ್ದರೆ, ಇನ್ನೊಂದೆಡೆ ಈ ನದಿಗಳ ಮೂಲಗಳಾದ ಕೆಂಪುಹೊಳೆ ಹಾಗೂ ಗುಂಡ್ಯಾ ಹೊಳೆಯಲ್ಲಿರುವ ಅಲ್ಪ ಸ್ವಲ್ಪ ನೀರೂ ಕೂಡಾ ಕಲುಷಿತಗೊಂಡು ಉಪಯೋಗಿಸಲು ಆಯೋಗ್ಯವಾದ ಸ್ಥಿತಿಯಲ್ಲಿದೆ. ಜಿಲ್ಲೆಯ ಜನಪ್ರತಿನಿಧಿಗಳು , ಅಧಿಕಾರಿಗಳು ಇತ್ತ ಗಮನಹರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನೀರಿಗಾಗಿ ಹೋರಾಟಗಳು ನಡೆಯುವ ಸಾಧ್ಯತೆಗಳೂ ದಟ್ಟವಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *