ಚಿಕಿತ್ಸೆಯ ಬಳಿಕವೂ ಚೇತರಿಸಿಕೊಳ್ಳದ ಬಾಳುಗೋಡು ಮೀಸಲು ಅರಣ್ಯದ ಆನೆ

ಪುತ್ತೂರು ಮೇ 16: ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸಲಗದ ಆರೋಗ್ಯದಲ್ಲಿ ಹೆಚ್ಚಿನ‌ ಚೇತರಿಕೆ ಕಂಡುಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಿಯ ಗ್ರಾಮಸ್ಥರು ಬುಧವಾರ ಕಾಡಿಗೆ ತೆರಳಿ ಆನೆಯ ಚಲನವಲನವನ್ನು ವೀಕ್ಷಿಸಿದ್ದಾರೆ. ಜೊತೆಗೆ ಬೈನೆ ಮರದ ಆಹಾರವನ್ನು ಆನೆಗೆ ನೀಡಿ ಬಂದಿದ್ದಾರೆ. ಈ ವೇಳೆ ಆನೆಯು ಚಿಕಿತ್ಸೆ ಪಡೆದ ನಂತರದಲ್ಲಿ ಕೂಡ ಚೇತರಿಕೊಳ್ಳದಿರುವುದು ಅವರಿಗೆ ಕಂಡುಬಂದಿದೆ. ಆನೆಯು ಶಕ್ತಿ ಹೀನವಾಗಿದ್ದು ನೋವು ಉಲ್ಬಣಿಸಿ ನಡೆಯಲು ಕಷ್ಟ ಪಡುತ್ತಿದೆ. ಸ್ಥಳಿಯರು ಆನೆ ಕುರಿತು ಅಕ್ಕರೆ ವ್ಯಕ್ತಪಡಿಸಿ ಆಹಾರ ನೀರು ಕೊಂಡು ಹೋಗಿ ನೀಡುತ್ತಿದ್ದಾರೆ.

ಈ ನಡುವೆ ಬುಧವಾರ ಅರಣ್ಯ ಇಲಾಖೆ ಸಿಬಂದಿಗಳು ಒಂದೆರಡು ಕೆಲಸದವರನ್ನು ತಮ್ಮ ಜೊತೆ ಕಾಡಿಗೆ ಕರೆದೊಯ್ದು ಆನೆಯನ್ನು ಪಟಾಕಿ ಸಿಡಿಸಿ ಕಾಡಿಂದಾಚೆಗೆ ಓಡಿಸಲು ಯತ್ನಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆನೆಯು ಓಡಲಾಗದೆ ಚಡಪಡಿಸುತಿದ್ದ ಬಗ್ಗೆಯು ಸ್ಥಳಿಯರು ಮಾಹಿತಿ ನೀಡಿದ್ದು. ಇದೇ ರೀತಿ ಆನೆಯನ್ನು ಬಿಟ್ಟರೆ ಅದರ ಆರೋಗ್ಯ ಪೂರ್ಣವಾಗಿ ಕೆಟ್ಟು ಸಾವಿನ ಅಂಚಿಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಅರಣ್ಯ ಇಲಾಖೆ ಆನೆಯ ಕುರಿತು ಗಂಭೀರ ವಾಗಿ ಪರಿಗಣಿಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.

Facebook Comments

comments