LATEST NEWS
ಬಂಟ್ವಾಳ ಅಪಾಯಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ಮನೆಗಳು ಜಲಾವೃತ
ಬಂಟ್ವಾಳ ಅಪಾಯಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ಮನೆಗಳು ಜಲಾವೃತ
ಮಂಗಳೂರು ಆಗಸ್ಟ್ 10:ಕರಾವಳಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಇಂದು ಕೂಡ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದು, ಜಿಲ್ಲೆಯ ಎಲ್ಲಾ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.
ಕಳೆದ 5 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಜೀವ ನದಿ ಎಂದೇ ಕರೆಯಲಾಗುವ ನೇತ್ರಾವತಿ ಉಗ್ರ ರೂಪತಾಳಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ಈ ಪರಿಣಾಮ ಬಂಟ್ವಾಳ ಸೇರಿದಂತೆ ನದಿ ತೀರದ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ.
ಮುಂಜಾನೆಯಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬಂಟ್ವಾಳ ಬಡ್ಡಕಟ್ಟೆ ಮೀನು ಮಾರ್ಕೆಟ್, ಬಸ್ ತಂಗುದಾಣ ಪ್ರದೇಶ, ಆಲಡ್ಕ, ಜಕ್ರಿಬೆಟ್ಟು, ಬಸ್ತಿಪಡ್ಪ ಬಳಿ ಕೇಂದ್ರದ ಮಾಜಿ ಹಾಗು ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿ ಅವರ ಮನೆಗೂ ನೇತ್ರಾವತಿ ನದಿ ನೀರು ನುಗ್ಗಿದ್ದು ಅವರನ್ನು ಎನ್ ಡಿ ಆರ್ ಎಫ್ ತಂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ನದಿ ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿರುವ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ 100 ಕ್ಕೂ ಅಧಿಕ ಮನೆಗಳು ಜಲಾವೃತ ಗೊಂಡಿವೆ. ತಡರಾತ್ರಿ ನೇತ್ರಾವತಿ ನೀರಿನ ಮಟ್ಟ 11.6 ಮೀಟರ್ ಮುಟ್ಟಿದ್ದು ನದಿ ತೀರದ 58 ಮನೆಗಳು ಜಲಾವೃತಗೊಂಡಿದ್ದವು. ಬೆಳ್ತಂಗಡಿ ಸಹಿತ ಘಟ್ಟಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾಗುತ್ತಿರುವ ಪರಿಣಾಮ ತಾಲೂಕಿನ ಕೆಲ ಪ್ರದೇಶ ಹಾಗೂ ನೆರೆ ನೀರು ನುಗ್ಗಿದೆ.
ಅಜಿಲಮೊಗರು, ನಾವೂರು, ಅಜಿಲಮೊಗರು, ಬಂಟ್ವಾಳ ಸಮೀಪದ ಜಕ್ರಿಬೆಟ್ಟು, ಕಡೇಶಿವಲಾಯ, ಬಡ್ಡಕಟ್ಟೆ, ವಿ.ಪಿ.ರಸ್ತೆ, ಕಂಚಿಕಾರಪೇಟೆ, ಬಸ್ತಿಪಡ್ಪು, ಭಂಡಾರಿಬೆಟ್ಟು, ನಂದರಬೆಟ್ಟು, ಬ್ರಹ್ಮರಕೊಟ್ಲು ಹಾಗೂ ಬರಿಮಾರು-ಬುಡೋಳಿ ಸಂಪರ್ಕ ರಸ್ತೆ ಮೊದಲಾದೆಡೆ ನೀರಿನಿಂದ ಮುಳುಗಡೆಯಾಗಿದೆ. ಹಲವು ಮನೆಗಳು, ತೋಟ, ಕೃಷಿ ಭೂಮಿಗೆ ನೆರೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿದೆ.
ಕಳೆದ 2 ದಿನಗಳಿಂದ ಮುಳುಗಡೆ ಪ್ರದೇಶದ ಸುಮಾರು 300ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಂಟ್ವಾಳ ಪ್ರವಾಸಿ ಮಂದಿರ, ಪಾಣೆಮಂಗಳೂರು ಪ್ರೌಢಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಇನ್ನಷ್ಟು ನೀರು ಏರಿಕೆಯಾದರೆ ಮತ್ತಷ್ಟು ಮನೆಗಳು ಮುಳುಗಡೆಯಾಗುವ ಭೀತಿಯಲ್ಲಿದ್ದು, ಈ ಮನೆಮಂದಿ ಮನೆ ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೇರಿದಂತೆ ಜಿಲ್ಲೆಯ ಇತರ ಹಿರಿಯ ಅಧಿಕಾರಿಗಳು ಹಾಗು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳದಲ್ಲಿಯೇ ಮೊಕ್ಕಾಂ ಹೂಡಿದ್ದು ಪರಿಸ್ಥತಿಯನ್ನು ಅವಲೋಕಿಸುತ್ತಿದ್ದಾರೆ. ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮುಳುಗಡೆ ಪ್ರದೇಶದ ಸಂತ್ರಸ್ಥರನ್ನು ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.