LATEST NEWS
ಚುನಾವಣೆ ಕರ್ತವ್ಯನಿರತ ವಾಹನ ಚಾಲಕರಿಗೂ ಮತದಾನಕ್ಕೆ ಅವಕಾಶ – ಉಡುಪಿ ಜಿಲ್ಲಾಧಿಕಾರಿ

ಚುನಾವಣೆ ಕರ್ತವ್ಯನಿರತ ವಾಹನ ಚಾಲಕರಿಗೂ ಮತದಾನಕ್ಕೆ ಅವಕಾಶ – ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಏಪ್ರಿಲ್ 2: ಖಾಸಗಿ ವಾಹನ ಸೇರಿದಂತೆ ಲೋಕಸಭಾ ಚುನಾವಣೆ ಮತಗಟ್ಟೆ ಕರ್ತವ್ಯಕ್ಕೆ ನಿಯೋಜಿಸುವ ಎಲ್ಲಾ ವಾಹನಗಳ ಚಾಲಕರಿಗೂ ಮತದಾನ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೆಫ್ಸಿಭಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ಅಂಚೆ ಮತದಾನ ಸಿದ್ಧತೆ ಕುರಿತು ಸಭೆಯಲ್ಲಿ ಮಾತನಾಡಿದರು.
ಚುನಾವಣಾ ಕರ್ತವ್ಯಕ್ಕೆ ಬಳಸಲಾಗುವ ಬಸ್ಸು, ಜೀಪು, ವ್ಯಾನು ಸೇರಿದಂತೆ ಎಲ್ಲಾ ಖಾಸಗೀ ವಾಹನಗಳ ಚಾಲಕರು ಮತದಾನದಿಂದ ವಂಚಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರ್‍ಟಿಓ ಅಧಿಕಾರಿಗಳು ಕೂಡಲೇ ಚುನಾವಣಾ ಮತಗಟ್ಟೆ ಕರ್ತವ್ಯಕ್ಕೆ ನಿಯೋಜಿಸುವ ಎಲ್ಲಾ ವಾಹನಗಳ ಪಟ್ಟಿಯನ್ನು ಸಿದ್ಧಗೊಳಿಸಬೇಕು. ಈ ವಾಹನಗಳ ಚಾಲಕರ ಡ್ರೈವಿಂಗ್ ಲೈಸನ್ಸ್ ಮತ್ತು ಎಪಿಕ್ ಕಾರ್ಡ್ ಪ್ರತಿಯನ್ನು ಸಂಗ್ರಹಿಸಿ ನೀಡಬೇಕು. ಕರ್ತವ್ಯಕ್ಕೆ ನಿಯೋಜಿಸಲಾಗುವ ಮತಗಟ್ಟೆಯಲ್ಲಿಯೇ ಅವರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆ ಕರ್ತವ್ಯದಲ್ಲಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಆಯಾ ಮತಗಟ್ಟೆಯಲ್ಲಿಯೇ ಮತದಾನ ಮಾಡಲು “ಚುನಾವಣಾ ಕರ್ತವ್ಯ ಪ್ರಮಾಣಪತ್ರ” ನೀಡಲಾಗುವುದು. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಹೊರಗೆ ಮತದಾನ ಪಟ್ಟಿಯಲ್ಲಿ ಹೆಸರು ಇರುವ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೆಪ್ಸಿಬಾ ರಾಣಿ ತಿಳಿಸಿದರು.
ಅಂಚೆ ಮತದಾನ ಹಾಗೂ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಮೂಲಕ ಮತದಾನ ಮಾಡುವವರು ಕೂಡಲೇ ಸಂಬಂಧಪಟ್ಟ ನಮೂನೆಯಲ್ಲಿ ತಮ್ಮ ಕೋರಿಕೆಯನ್ನು ಏಪ್ರಿಲ್ 12 ರೊಳಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ವಾಹನಗಳಿಗೆ ಜಿಪಿಎಸ್: ಚುನಾವಣಾ ದಿನದ ಕರ್ತವ್ಯಕ್ಕೆ ಬಳಸಲಾಗುವ ಎಲ್ಲಾ ಖಾಸಗೀ ಮತ್ತು ಸರಕಾರಿ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಾಗುವುದು. ಇದಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಿಪಿಎಸ್ ಇಲ್ಲದ ವಾಹನಗಳಿಗೆ ಯಾವುದೇ ಕಾರಣಕ್ಕೂ ಚುನಾವಣಾ ಕರ್ತವ್ಯಕ್ಕೆ ಬಳಸುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹೇಳಿದರು.