Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಡಿಮೆಯಾದ ಮತದಾರರ ಸಂಖ್ಯೆ….!!

    ಮಂಗಳೂರು ನವೆಂಬರ್ 12: ಚುನಾವಣಾ ಹೊಸ್ತಿಲಿನಲ್ಲಿ ರಾಜ್ಯ ಇದ್ದು, ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳು ಕರಡು ಮತದಾರರ ಪಟ್ಟಿ ತಯಾರಿಕೆಯಲ್ಲಿ ತೊಡಗಿವೆ. ಇದರನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾಕ್ಷೇತ್ರಗಳ ಮತದಾರರ ಕರಡು ಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ. ಇದರನ್ವಯ ಜಿಲ್ಲೆಯಲ್ಲಿ ಒಟ್ಟು 17,08,955 ಮತದಾರರು ಪಟ್ಟಿಯಲ್ಲಿದ್ದಾರೆ. ಕಳೆದ ವರ್ಷದ ಮತದಾರರ ಪಟ್ಟಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ 44,373ರಷ್ಟು ಕಡಿಮೆ ಆಗಿದೆ.


    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್‌.ರವಿಕುಮಾರ್‌, ‘ಕಳೆದ ವರ್ಷ ಮತದಾರರ ಪಟ್ಟಿಯಲ್ಲಿ 17,53,328 ಮಂದಿಯ ಹೆಸರು ಇತ್ತು. ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದಾಗ ಅನೇಕ ಮತದಾರರು ಬೇರೆ ಕಡೆಗೆ ಕ್ಷೇತ್ರದಿಂದ ಹೊರಗೆ ಹೋಗಿ ನೆಲೆಸಿರುವುದು ಕಂಡುಬಂದಿದೆ. ಇನ್ನು ಕೆಲವರು ಮೃತಪಟ್ಟಿದ್ದಾರೆ. ಇಂತಹ 73,783 ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದ್ದೇವೆ. ಈ ವರ್ಷ ಹೊಸತಾಗಿ 29,410 ಮತದಾರರು ಸೇರ್ಪಡೆ ಮಾಡಿದ್ದೇವೆ. ಒಟ್ಟಾರೆಯಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಮತದಾರರ ಸಂಖ್ಯೆ 44,373ರಷ್ಟು ಕಡಿಮೆ ಆಗಿದೆ. ಮತದಾರರ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಡಿ.8ರವರೆಗೆ ಕಾಲಾವಕಾಶ ನೀಡಲಾಗಿದೆ’ ಎಂದು ವಿವರಿಸಿದರು.

    ಹೊಸ ಸೇರ್ಪಡೆಗೆ ಅಭಿಯಾನ: ‘18 ವರ್ಷ ತುಂಬಿದ ಮತದಾರರ ಸೇರ್ಪಡೆಗೆ ನ.12, ನ.20, ಡಿ.3 ಹಾಗೂ ಡಿ.4ರಂದು ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ವಿಶೇಷ ಅಭಿಯಾನ ಏರ್ಪಡಿಸಲಾಗುತ್ತದೆ. ಪಟ್ಟಿಗೆ ಹೊಸತಾಗಿ ಸೇರ್ಪಡೆಗೊಳ್ಳುವ ಹೆಸರುಗಳಿಗೆ ಡಿ.26ರ ಒಳಗೆ ಆಕ್ಷೇಪ ಸಲ್ಲಿಸಬಹುದು. ಪರಿಷ್ಕೃತ ಪಟ್ಟಿಯನ್ನು 2023ರ ಜ.1ರಂದು ಅಂತಿಮಗೊಳಿಸಿ, ಜ. 3ರಂದು ಮುದ್ರಣಕ್ಕೆ ಕಳುಹಿಸುತ್ತೇವೆ. ಜ. 5ರಂದು ಪರಿಷ್ಕೃತ ಪಟ್ಟಿ ಲಭ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ 8 ಕ್ಷೇತ್ರಗಳಲ್ಲಿ 1,861 ಮತಗಟ್ಟೆಗಳಿದ್ದವು. ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 6ರಲ್ಲಿ 29 ಮತದಾರರು ಮಾತ್ರ ಇದ್ದರು. ಆ ಮತಗಟ್ಟೆಯನ್ನು ಮತಗಟ್ಟೆ ಸಂಖ್ಯೆ 5ರಲ್ಲಿ ವಿಲೀನ ಮಾಡಲಾಗಿದೆ. ಹಾಗಾಗಿ ಜಿಲ್ಲೆಯ ಒಟ್ಟು ಮತಗಟ್ಟೆಗಳ ಸಂಖ್ಯೆ 1860ಕ್ಕೆ ಇಳಿಕೆ ಆಗಿದೆ’ ಎಂದು ತಿಳಿಸಿದರು. ‘ಜಿಲ್ಲೆಯ ಒಟ್ಟು ಜನಸಂಖ್ಯೆ ಮತ್ತು ಮತದಾರರ ನಡುವಿನ ಅನುಪಾತ ಶೇ 72ರಷ್ಟು ಇದೆ. 18 ವರ್ಷ ಮೇಲಿನವರು ಹೆಸರು ಸೇರ್ಪಡೆ ಸಮರ್ಪಕವಾಗಿ ಆಗುತ್ತಿರುವುದನ್ನು ಇದು ತೋರಿಸುತ್ತದೆ. ಹೆಸರು ಸೇರ್ಪಡೆಗೆ ಬಾಕಿ ಇರುವವರು, ಹುಟ್ಟಿದ ದಿನಾಂಕ ಹಾಗೂ ವಾಸ್ತವ್ಯದ ದಾಖಲೆ ನೀಡಿ ಹೆಸರು ಸೇರ್ಪಡೆ ಮಾಡಬಹುದು. ಈ ದಾಖಲೆಗಳು ಇಲ್ಲದಿದ್ದರೆ, ಸ್ಥಳೀಯ ಬೂತ್‌ ಮಟ್ಟದ ಅಧಿಕಾರಿ ಸ್ಥಳ ಮಹಜರು ನಡೆಸಿ ವಾಸ್ತವ್ಯವನ್ನು ದೃಢೀಕರಿಸಿದ ಬಳಿಕ ಹೆಸರು ಸೇರ್ಪಡೆ ಮಾಡಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಪ್ರಕ್ರಿಯೆಗೆ ಆಯಾ ಉಪವಿಭಾಗಾಧಿಕಾರಿಯವರನ್ನು ನೋಂದಣಾಧಿಕಾರಿ ಹಾಗೂ ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಹಶೀಲ್ದಾರ್‌ ಅವರು ಸಹಾಯಕ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗೂ ಉಪವಿಭಾಗಾಧಿಕಾರಿ ಮದನ್‌ ಮೋಹನ್‌ ಇದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *