LATEST NEWS
ವಿಶಾಲ ಗಾಣಿಗ ಕೊಲೆ ಪ್ರಕರಣ – ಪೊಲೀಸ್ ತನಿಖೆ ಎದುರು ಫ್ಲಾಪ್ ಆದ ಪತಿಯ ಮಾಸ್ಟರ್ ಪ್ಲ್ಯಾನ್…!!

ಉಡುಪಿ ಜುಲೈ 21: ಪತ್ನಿಯನ್ನು ಕೊಲೆ ಮಾಡಲು ತಿಂಗಳಿನ ಹಿಂದೆಯೇ ಮಾಸ್ಟರ್ ಪ್ಲ್ಯಾನ್ ಮಾಡಿ ಅದರಂತೆ ನಡೆದುಕೊಂಡು ಸುಳಿವೇ ಸಿಗದಂತೆ ಕೊಲೆ ಮಾಡಿದ ಪತಿಯ ಮಾಸ್ಟರ್ ಪ್ಲ್ಯಾನ್ ಪೊಲೀಸರ ತನಿಖೆ ಮುಂದೆ ಫ್ಲಾಪ್ ಆಗಿದ್ದು, ಕೊನೆಗೂ ಸುಫಾರಿ ಹಂತಕರ ಜೊತೆ ಪತಿಯೂ ಪೊಲೀಸರ ಅತಿಥಿಯಾಗಿದ್ದಾನೆ. ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಉಡುಪಿ ಪೊಲೀಸರು ಸಫಲರಾಗಿದ್ದು, ಸುಫಾರಿ ಕೊಟ್ಟ ಪತಿ ರಾಮಕೃಷ್ಣ ಹಾಗೂ ಸುಫಾರಿ ಕಿಲ್ಲರ್ ಸ್ವಾಮಿನಾಥನ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಈ ಕೊಲೆ ಪ್ರಕರಣದ ತನಿಖೆ ಬಗ್ಗೆ ಮಾಹಿತಿ ನೀಡಿದ ಉಡುಪಿ ಎಸ್‌ಪಿ ಎನ್.ವಿಷ್ಣುವರ್ಧನ್ ಕೊಲೆ ಪ್ರಕರಣದ ಹಿಂದಿರುವ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟರು.
ಪತ್ನಿ ವಿಶಾಲಾರನ್ನು ಕೊಲೆ ಮಾಡಲೇಬೇಕು ಎಂದು ಸಂಚು ರೂಪಿಸಿದ್ದ ರಾಮಕೃಷ್ಣ ಗಾಣಿಗಾ ಇದಕ್ಕಾಗಿ ಆರೇಳು ತಿಂಗಳ ಹಿಂದೆಯೇ ದುಬೈನಲ್ಲಿ ಕುಳಿತು ಮರ್ಡರ್ ಪ್ಲ್ಯಾನ್ ರೂಪಿಸಿದ್ದ. ಇದಕ್ಕಾಗಿಯೇ ಕೇರಳದ ಒಬ್ಬ ಗೆಳೆಯನನ್ನು ಗೊತ್ತು ಮಾಡಿ ಸುಪಾರಿ ಕಿಲ್ಲರ್ ಒಬ್ಬನನ್ನು ಪರಿಚಯಿಸುವಂತೆ ಹೇಳಿದ್ದ. ಈ ಹಿನ್ನೆಲೆಯಲ್ಲಿ ಆತ ಉತ್ತರ ಪ್ರದೇಶ ಮೂಲದ ಸುಪಾರಿ ಕಿಲ್ಲರ್ ಆರೋಪಿ ಸ್ವಾಮಿನಾಥ ನಿಶಾದ ಎಂಬುವವನನ್ನು ಪರಿಚಯಿಸಿದ್ದ. ಅವನಿಗೆ ಮುಂಗಡವಾಗಿ ಎರಡು ಲಕ್ಷ ರೂಪಾಯಿಗಳನ್ನು ಕೊಟ್ಟು ಸುಪಾರಿ ಕಿಲ್ಲಿಂಗ್ ಬುಕ್ ಮಾಡಿಕೊಂಡಿದ್ದ.

ಈ ನಡುವೆ ಮಾರ್ಚ್‌ನಲ್ಲಿ ದುಬೈನಿಂದ ಉಡುಪಿಗೆ ಬಂದು ಕುಟುಂಬದ ಜತೆ ನೆಲೆಸಿದ್ದ ಆರೋಪಿ ಪತಿ ರಾಮಕೃಷ್ಣ ಈ ಸಂದರ್ಭ ಕೊಲೆ ಮಾಡಲು ಸಹಾಯವಾಗಲಿ ಎಂದು ಸುಪಾರಿ ಕಿಲ್ಲರ್‌ಗಳನ್ನು ಮನೆಗೆ ಕರೆಸಿ ಸ್ನೇಹಿತರು ಎಂದು ಪತ್ನಿಗೆ ಪರಿಚಯ ಮಾಡಿಕೊಟ್ಟು, ಫ್ಲಾಟ್‌ನ ಇಂಚಿಂಚೂ ಮಾಹಿತಿ ನೀಡಿದ್ದ. ಬಳಿಕ ಮತ್ತೆ ದುಬೈಗೆ ತೆರಳಿದ್ದ.
ಅಪಾರ್ಟ್‌ಮೆಂಟ್‌ಗೆ ಅಪರಿಚಿತರು ಬಂದರೆ ವಿಶಾಲ ಬಾಗಿಲು ತೆರೆಯುತ್ತಿರಲಿಲ್ಲ. ಪತ್ನಿಯ ಗುಣ ಅರಿತಿದ್ದ ಪತಿಯು ವಿಶಾಲ ಕೊಲೆಯಾಗುವ ವಾರದ ಮೊದಲು ಕರೆ ಮಾಡಿ ಸ್ನೇಹಿತರೊಬ್ಬರು ಮನೆಗೆ ಪಾರ್ಸೆಲ್ ತಂದುಕೊಡಲಿದ್ದು ಸ್ವೀಕರಿಸುವಂತೆ ತಿಳಿಸಿದ್ದ. ಪೋಷಕರ ಮನೆಯಲ್ಲಿದ್ದ ವಿಶಾಲ ಒಂಟಿಯಾಗಿ ಅಪಾರ್ಟ್‌ಮೆಂಟ್‌ಗೆ ಬಂದು ಪಾರ್ಸೆಲ್ ತೆಗೆದುಕೊಂಡಿದ್ದರು. ಬಳಿಕ, ಜುಲೈ 12ರಂದು ಮತ್ತೆ ಕರೆ ಮಾಡಿ ಸ್ನೇಹಿತರು ಪಾರ್ಸೆಲ್ ಕೊಡಲಿದ್ದು ಸ್ವೀಕರಿಸುವಂತೆ ತಿಳಿಸಿದ್ದ. ಅದರಂತೆ, ಸುಪಾರಿ ಕಿಲ್ಲರ್‌ಗಳು ಅಪಾರ್ಟ್‌ಮೆಂಟ್‌ಗೆ ಬಂದಾಗ, ಮೊದಲೇ ಆರೋಪಿಗಳ ಪರಿಚಯವಿದ್ದ ವಿಶಾಲ ಸ್ವಲ್ಪವೂ ಅನುಮಾನಿಸದೆ ಬಾಗಿಲು ತೆರೆದರು. ಬಳಿಕ ಹಂತಕರು ವೈರ್‌ನಿಂದ ವಿಶಾಲ ಕುತ್ತಿಗೆ ಬಿಗಿದು ಕೊಲೆ ಮಾಡಿದರು.
ಕೊಲೆ ನಡೆದ ನಂತರ ಕುಟುಂಬಸ್ಥರು ಗಂಡ ರಾಮಕೃಷ್ಣನಿಗೆ ಮಾಹಿತಿ ತಲುಪಿಸುತ್ತಾರೆ. ಈ ವೇಳೆ ಆತ ಏನೂ ಗೊತ್ತಿಲ್ಲದವನಂತೆ ನಟಿಸಿ ತರಾತುರಿಯಲ್ಲಿ ದುಬೈನಿಂದ ಊರಿಗೆ ಬರುತ್ತಾನೆ. ತನ್ನ ಮನೆಯಲ್ಲೇ ಅಂತ್ಯಸಂಸ್ಕಾರದ ವ್ಯವಸ್ಥೆಗೆ ಸಿದ್ದತೆ ನಡೆಸುತ್ತಾನೆ. ಈ ವೇಳೆ ಮಗುವನ್ನು ಅಪ್ಪಿ ಅತ್ತು ನಾಟಕವಾಡುತ್ತಾನೆ. ತದನಂತರ ಆಕೆಯನ್ನು ಅಂತ್ಯಸಂಸ್ಕಾರ ನೆರವೇರಿಸಿ, ಆಕೆಯ ಕ್ರಿಯೆಯಲ್ಲೂ ಭಾಗವಹಿಸುತ್ತಾನೆ. ಈದಾಗಲೇ ಪೊಲೀಸರು ತಮ್ಮ ತನಿಖೆ ಪ್ರಾರಂಭಿಸಿದ್ದರು. ಇದರ ವಿಚಾರಣೆಗಾಗಿ ಗಂಡ ರಾಮಕೃಷ್ಣನನ್ನು ಕರೆಯುತ್ತಾರೆ. ಈ ವೇಳೆ ಪೊಲೀಸರ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡುವುದಿಲ್ಲ. ಆದರೂ ಪೊಲೀಸರು ಯಾವುದೇ ಸಾಕ್ಷ್ಯವಿಲ್ಲದ ಕಾರಣ ಮುಂದಿನ ಬಾರಿ ವಿಚಾರಣೆಗೆ ಕರೆದಾಗ ಬರುವಂತೆ ಹೇಳಿ ಕಳುಹಿಸಿದ್ದರು.
ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಎಸ್‌ಪಿ ವಿಷ್ಣುವರ್ಧನ್ ಆರೋಪಿಗಳ ಪತ್ತೆಗೆ 5 ತಂಡಗಳನ್ನು ರಚಿಸಿದ್ದರು. ಕುಂದಾಪುರದಿಂದ ಉಡುಪಿ ಹಾಗೂ ಕಾಪುವರೆಗಿನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಲಾಯಿತು. ವಿಮಾನ ನಿಲ್ದಾಣಕ್ಕೆ ತೆರಳಿ ಟಿಕೆಟ್ ಮಾಹಿತಿ ಹಾಗೂ ಅಲ್ಲಿನ ಟ್ಯಾಕ್ಸಿ ಚಾಲಕರಿಂದ ಮಾಹಿತಿ ಸಂಗ್ರಹಿಸಲಾಯಿತು. ಅಪಾರ್ಟ್‌ಮೆಂಟ್ ನಿವಾಸಿಗಳು, ವಿಶಾಲ ಪೋಷಕರು, ಸಂಬಂಧಿಗಳನ್ನು ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಹಾಸನ, ಬೆಂಗಳೂರು, ಮಂಗಳೂರು, ಹೈದರಾಬಾದ್, ಕೇರಳ, ಮಹಾರಾಷ್ಟ್ರಕ್ಕೆ ತೆರಳಿದ್ದ ಪೊಲೀಸರು ನಿರಂತರ ಶ್ರಮಹಾಕಿದರೂ ಪ್ರಯೋಜನವಾಗಿರಲಿಲ್ಲ.
ಆದರೆ ತಾಂತ್ರಿಕ ಮಾಹಿತಿ ಕೊಲೆಗಾರರ ಬೆನ್ನಟ್ಟಲು ಸಹಕಾರಿಯಾಗಿತ್ತು, ತಾಂತ್ರಿಕ ಮಾಹಿತಿ ಬೆನ್ನತ್ತಿದ ಪೊಲೀಸರು ಉತ್ತರ ಪ್ರದೇಶದ ಪೊಲೀಸರ ಸಹಕಾರದಿಂದ ಸುಪಾರಿ ಕಿಲ್ಲರ್‌ನನ್ನು ನೇಪಾಳದ ಗಡಿಯಲ್ಲಿ ಬಂಧನ ನಡೆಸಿ ಉಡುಪಿಗೆ ಕರೆತರುತ್ತಾರೆ. ಈ ವೇಳೆ ಆತ ನನಗೆ ಸುಪಾರಿ ನೀಡಿದ್ದು ಆಕೆಯ ಗಂಡನೇ ಎಂಬುವುದಾಗಿ ವಿಚಾರಣೆಯಲ್ಲಿ ತಿಳಿಸುತ್ತಾನೆ. ಈ ವೇಳೆ ಮತ್ತೊಮ್ಮೆ ಪತಿ ರಾಮಕೃಷ್ಣನನ್ನು ವಿಚಾರಣೆಗೆ ಕರೆಸಿ ತೀವ್ರ ತನಿಖೆ ನಡೆಸಿದಾಗ ಸುಪಾರಿ ನೀಡಿದ್ದರ ಬಗ್ಗೆ ಮಾಹಿತಿ ನೀಡುತ್ತಾನೆ. ಸುಪಾರಿ ಕಿಲ್ಲರ್ ಪರಿಚಯಿಸಿದ ಕೇರಳ ಮೂಲದ ಆರೋಪಿಯ ಬಗ್ಗೆ ಸುಳಿವು ಸಿಕ್ಕಿದ್ದು ಶೀಘ್ರದಲ್ಲಿಯೇ ಆತನನ್ನು ಬಂಧಿಸಲಾಗುವುದು ಎಂದರು.