BANTWAL
ಓದಿದ್ದು ಎಸ್ಎಸ್ಎಲ್ ಸಿ ಕ್ಯಾಲ್ಕುಲೇಟರ್ ಗಿಂತ ಫಾಸ್ಟ್ ಇವರ ಬಾಯಿ ಲೆಕ್ಕಾಚಾರ – ವೈರಲ್ ವಿಡಿಯೋದ ಜನ ಇವರೇ
ಬಂಟ್ವಾಳ ಸೆಪ್ಟೆಂಬರ್ 11: ಸಾಮಾಜಿಕ ಜಾಲತಾಣದಲ್ಲಿ ಕ್ಯಾಲ್ಕುಲೇಟರ್ ಗಿಂತ ಫಾಸ್ಟ್ ಆಗಿ ಲೆಕ್ಕಾಚಾರ ಮಾಜುವ ವಿಡಿಯೋ ವೈರಲ್ ಆಗಿತ್ತು, ಸಣ್ಣ ಪುಟ್ಟ ಲೆಕ್ಕಕ್ಕೂ ಮೊಬೈಲ್ ಅಥವಾ ಕ್ಯಾಲ್ಕುಲೇಟರ್ ಬಳಸುವ ಈ ಕಾಲದಲ್ಲಿ ಇಲ್ಲೊಬ್ಬರು ಕ್ಯಾಲ್ಕುಲೇಟರ್ ಗಿಂತಲೂ ಫಾಸ್ಟ್ ಆಗಿ ಲೆಕ್ಕ ಮಾಡುತ್ತಾರೆ. ಹಾಗೆಂದು ಇವರೇನು ಗಣಿತದಲ್ಲಿ ಪಿಎಚ್ಡಿ ಮಾಡಿದವರಲ್ಲ, ಇವರು ಜಸ್ಟ್ ಎಸ್.ಎಸ್.ಎಲ್.ಸಿ ಪಾಸು.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ದಿನಸಿ ಅಂಗಡಿಯ ಬಿಲ್ ನ್ನು ಲೆಕ್ಕ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅವರೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯಲ್ಲಿರುವ ಎಮ್.ಜೆ. ಮರ್ಚೆಂಟ್ಸ್ ಎನ್ನುವ ದಿನಸಿ ಅಂಗಡಿಯಲ್ಲಿರುವ ವೆಂಕಟೇಶ್ ಕಾಮತ್ .
ವೆಂಕಟೇಶ್ ತನ್ನ ತಾತ ,ಅಪ್ಪ ಆರಂಭಿಸಿದ್ದ ದಿನಸಿ ಅಂಗಡಿ ವ್ಯಾಪಾರವನ್ನು ಮುಂದುವರಿಸಿಕೊಂಡು ಬರುತ್ತಿರುವ ಒರ್ವ ವ್ಯಾಪಾರಿ. ಆದರೆ ಇವರು ಮಾತ್ರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆದ ವ್ಯಕ್ತಿ . ಅಂಗಡಿಗೆ ಬರುವ ವ್ಯಕ್ತಿಯೋರ್ವರು ಖರೀದಿಸಿದ ಸಾಮಾನುಗಳ ಲೆಕ್ಕವನ್ನು ಪಟ-ಪಟನೆ ಲೆಕ್ಕ ಮಾಡಿ ಇಡುವ ಇವರ ಈ ಸ್ಕಿಲ್ ಕಂಡು ನಿಬ್ಬೆರಗಾದವರೇ ಹೆಚ್ಚು. ಬಂಟ್ವಾಳ ಪೇಟೆಯ ಬಡ್ಡಕಟ್ಟೆ ಎಂಬಲ್ಲಿ ವೆಂಕಟೇಶ್ ಅವರ ತಾತ ಆರಂಭಿಸಿದ್ದ ದಿನಸಿ ಅಂಗಡಿಯನ್ನು ತಾತನ ಕಾಲಾನಂತರದಲ್ಲಿ ವೆಂಕಟೇಶ್ ತಂದೆ ಮುಂದುವರಿಸಿಕೊಂಡು ಬಂದಿದ್ದಾರೆ.
ವೆಂಕಟೇಶ್ ತನ್ನ ಎಸ್.ಎಸ್.ಎಲ್.ಸಿ ಮುಗಿಸಿ ಇನ್ನೇನು ಪಿಯುಸಿ ಕಲಿಯಲು ಆರಂಭಿಸಿದ ಕೆಲವೇ ತಿಂಗಳಿನಲ್ಲಿ ವೆಂಕಟೇಶ್ ತಂದೆಗೆ ಮಲೇರಿಯಾ ಜ್ವರ ಕಾಡಿತ್ತು. ಇದರಿಂದಾಗಿ ತಂದೆಗೆ ಒಬ್ಬನೇ ಮಗನಾಗಿರುವ ವೆಂಕಟೇಶ್ ಮೇಲೆ ಸಹಜವಾಗಿಯೇ ಅಂಗಡಿಯ ಹೊರೆ ಒಂದು ಪಾರ್ಶ್ವಕ್ಕೆ ಬಿದ್ದಿತ್ತು. ಬಳಿಕದ ದಿನಗಳಲ್ಲಿ ತಂದೆಗೆ ಸಹಾಯಕನಾಗಿ ಅಂಗಡಿಯಲ್ಲೇ ಉಳಿಯಬೇಕಾಗಿದ್ದ ವೆಂಕಟೇಶ್ ಗೆ ತನ್ನ ವಿಸ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಿಲ್ಲ. ತಂದೆಯ ಬಳಿಕ ಇದೀಗ ಫುಲ್ ವ್ಯಾಪಾರದಲ್ಲೇ ತೊಡಗಿಸಿಕೊಂಡಿರುವ ವೆಂಕಟೇಶ್ ತಮ್ಮ ಅಂಗಡಿಗೆ ಬರುವ ಗ್ರಾಹಕರ ಸಾಮಾಗ್ರಿಗಳ ಚೀಟಿನ ಬಿಲ್ಲನ್ನು ಎಷ್ಟು ಉದ್ದವಿರಲಿ ಅದನ್ನು ಕ್ಷಣ ಮಾತ್ರದಲ್ಲಿ ಲೆಕ್ಕ ಮಾಡಿ ಕೊಡುತ್ತಾರೆ. ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲಿ ಕ್ಯಾಲ್ಕುಲೇಟರ್ ಗಳನ್ನೇ ಲೆಕ್ಕ ಮಾಡಲು ಬಳಸಿದರೆ, ಇವರು ತನ್ನ ಅದ್ಭುತ ಅನುಭವದಿಂದ ಲೆಕ್ಕ ಮಾಡುತ್ತಾರೆ. ಕ್ಯಾಲ್ಕುಲೇಟರ್ ಗಿಂದ ಒಂದು ಹೆಜ್ಜೆ ಮುಂದೇ ಇವರ ಲೆಕ್ಕಾಚಾರ ಮುಗಿಯುತ್ತೆ.
ಕಳೆದ 35 ವರ್ಷಗಳ ವ್ಯಾಪಾರದ ಅನುಭವ ಈ ರೀತಿ ಲೆಕ್ಕಾಚಾರವನ್ನು ಕಲಿಸಿದ ಎನ್ನುತ್ತಾರೆ ವೆಂಕಟೇಶ್. ಅಂಗಡಿಗೆ ಬರುವ ಗ್ರಾಹಕರನ್ನು ಸ್ನೇಹದಿಂಸ ಬರಮಾಡಿಕೊಂಡು, ವಿಚಾರಿಸುವ ಇವರ ಪ್ರವೃತ್ತಿಯಿಂದ ಬಂಟ್ವಾಳ ಪೇಟೆಯಾದ್ಯಂತ ಇವರು ಚಿರಪರಿಚಿತರೂ ಆಗಿದ್ದಾರೆ.