Connect with us

National

8 ಮಂದಿ ಪೊಲೀಸರ ಹತ್ಯೆಗೈದಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆ ಬಂಧನ

ಕಾನ್ಪುರ: 8 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ಕುಖ್ಯಾತ ಗ್ಯಾಂಗ್’ಸ್ಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲಾಗಿದೆ. ಇಂದು ಬೆಳಗ್ಗೆ ವಿಕಾಸ್ ದುಬೆ ಉಜ್ಜೈನ್ ನಲ್ಲಿರುವ ಮಹಾಕಾಲ್ ದೇವಸ್ಥಾನಕ್ಕೆ ಹೋಗಿದ್ದನು. ದೇವಸ್ಥಾನದ ಭದ್ರತಾ ಸಿಬ್ಬಂದಿ ದುಬೆಯನ್ನು ಗುರುತಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವಸ್ಥಾನದಿಂದ ಹೊರ ಬರೋಷ್ಟರಲ್ಲಿ ಬಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.


ಉತ್ತರಪ್ರದೇಶ ರಾಜ್ಯದಲ್ಲಿ 60 ಅಪರಾಧ ಕೇಸುಗಳಿದ್ದ ವಿಕಾಸ್ ದುಬೆ ಎಂಬ ಪಾತಕಿಯನ್ನು ಬಂಧಿಸಲು ಪೊಲೀಸರು ದಿಕ್ರು ಎಂಬ ಗ್ರಾಮಕ್ಕೆ ಕಳೆದ ಶುಕ್ರವಾರ ನಸುಕಿನ ಜಾವ ತೆರಳಿದಾಗ ಮೊದಲ ಎನ್’ಕೌಂಟರ್ ನಡೆದಿತ್ತು. ಪೊಲೀಸರು ಬರುವ ಸುಳಿವು ಅರಿತಿದ್ದ ವಿಕಾಸ್ ದುಬೆ ಸಹಚರರು, ರಸ್ತೆಗೆ ಅಡ್ಡಲಾಗಿ ಕಲ್ಲು-ಕಟ್ಟಿಗೆಗಳನ್ನು ಇಟ್ಟಿದ್ದರು.


ಪೊಲೀಸರು ಇವನ್ನು ತೆರವುಗೊಳಿಸಿ ದುಬೆ ಅವಿತಿದ್ದ ಮನೆಯತ್ತ ಆಗಮಿಸಲು ಅಣಿಯಾಗುತ್ತಿದ್ದಂತೆಯೇ ಆತನ ಮನೆಯ ಮೇಲಿಂದ ಕ್ರಿಮಿನಲ್’ಗಳು ಗುಂಡಿನ ಮಳೆಗೆರೆದಿದ್ದಾರೆ. ಆಗ ಗುಂಡೇಟು ತಿಂದ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ 4 ಪೇದೆಗಳು ಅಸುನೀಗಿದ್ದರು.


ಕ್ರಿಮಿನಲ್ ಗಳು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು. ಪೊಲೀಸರು ಈ ಹಿಂದೆ ಹೊಂದಿದ್ದ ಶಸ್ತ್ರಾಸ್ತ್ರಗಳು ದುಬೆಗೆ ದೊರೆತಿದ್ದು, ಅವುಗಳನ್ನೇ ಪೊಲೀಸರ ಮೇಲೆ ದಾಳಿ ನಾಡಲು ದುಬೆ ಸಹಚರರು ಬಳಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಪ್ರೇಮ್ ಪ್ರಕಾಶ್ ಪಾಂಡೆ ಹಾಗೂ ಅತುಲ್ ದುಬೆ ಎಂಬ ಇಬ್ಬರು ಕ್ರಿಮಿನಲ್ ಗಳನ್ನು ಹೊಡೆದುರುಳಿಸಿದ್ದರು.

Facebook Comments

comments