Connect with us

National

ಗೋಲ್ಡ್ ಸ್ಮಗ್ಲಿಂಗ್ ; ಕಿಂಗ್ ಪಿನ್ ಮಹಿಳೆ ಹಿಂದಿದ್ಯಾ ಪಿಣರಾಯಿ ಅಭಯ ?   

30 ಕೇಜಿ ಚಿನ್ನದ ಸ್ಮಗ್ಲಿಂಗ್ ಹಿಂದಿರೋದು ಯಾರು? ಯಾರೀಕೆ ಮಹಿಳೆ ?

ತಿರುವನಂತಪುರ, ಜುಲೈ 8: ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ 30 ಕೇಜಿ ಚಿನ್ನದ ಮೂಟೆಯ ಹಿಂದೆ ಕೇರಳ ಸಿಎಂ ಕಚೇರಿಗೂ ನಂಟಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ಸಿಎಂ ಕಚೇರಿಗೆ ಆಪ್ತಳಾಗಿರುವ ಸ್ವಪ್ನಾ ಸುರೇಶ್ ಎಂಬ ಸುಂದರಿಯ ಪಾತ್ರ ಇರುವುದು ಕಂಡುಬಂದಿದೆ.


ಎರಡು ದಿನಗಳ ಹಿಂದೆ ತಿರುವನಂತಪುರದ ವಿಮಾನ ನಿಲ್ದಾಣಕ್ಕೆ ಕಾರ್ಗೋ ವಿಮಾನದಲ್ಲಿ ಬಂದಿದ್ದ ಬಾಕ್ಸ್ ಗಳನ್ನು ಸಂಶಯದ ಮೇರೆಗೆ ಕಸ್ಟಮ್ಸ್  ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಬಾಕ್ಸ್ ನಲ್ಲಿದ್ದ ಪ್ಲಂಬಿಂಗ್ ಐಟಂಗಳು, ವಾಟರ್ ಟ್ಯಾಪ್ ಗಳು, ಹಾಗೂ ಡೋರ್ ಲಾಕ್ ಗಳ ನಡುವೆ ಸಿಲಿಂಡರ್ ಆಕಾರದ 15 ಕೋಟಿ ಮೌಲ್ಯದ 30 ಕೇಜಿ ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದವು.

ಕಾರ್ಗೋ ಬ್ಯಾಗ್ ನಲ್ಲಿದ್ದ ವಿಳಾಸ ತಿರುವನಂತಪುರದ ಯುಎಇ ಕಾನ್ಸುಲೇಟ್ ಹೆಸರಿನಲ್ಲಿತ್ತು. ಆದರೆ ಯಾರೂ ಕಾರ್ಗೋ ಬ್ಯಾಗನ್ನು ಪಡೆಯಲು ಬಂದಿರಲಿಲ್ಲ. ಬಳಿಕ ಸರಿತ್ ಕುಮಾರ್ ಎನ್ನುವ ವ್ಯಕ್ತಿ ಬ್ಯಾಗ್ ಪಡೆಯಲು ಬಂದಿದ್ದ. ಕಸ್ಟಮ್ಸ್ ಅಧಿಕಾರಿಗಳು ಆತನ ಐಡಿ ಪರಿಶೀಲನೆ ನಡೆಸಿದಾಗ ಅದು ನಕಲಿಯಾಗಿತ್ತು. ಅಲ್ಲದೆ, ಸರಿತ್ ಕುಮಾರ್ ಈ ಹಿಂದೆ ಯುಎಇ ಕಾನ್ಸುಲೇಟ್ ಕಚೇರಿಯಲ್ಲಿ ಪಿಆರ್ ಓ ಆಗಿದ್ದ ಅನ್ನುವುದೂ ತಿಳಿದುಬಂತು. ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸ್ಮಗ್ಲಿಂಗ್ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಎಂಬಾಕೆಯ ಪಾತ್ರ ಇರುವ ಬಗ್ಗೆ ಬಾಯಿ ಬಿಟ್ಟಿದ್ದ.


ಸಿಎಂ ಪಿಣರಾಯಿ ವಿಜಯನ್ ಆಪ್ತೆಯಾಗಿರುವ ಸ್ವಪ್ನಾ ಸುರೇಶ್, ಕೇರಳ ಐಟಿ ಸೆಲ್ ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿರುವ ಪ್ರಭಾವಿ ಮಹಿಳೆ. ಗೋಲ್ಡ್ ಸ್ಮಗ್ಲಿಂಗ್ ಜಾಲ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಸ್ವಪ್ನಾ ಸುರೇಶ್ ತಲೆಮರೆಸಿಕೊಂಡಿದ್ದಾಳೆ. ಇದೇ ವೇಳೆ, ಸರಿತ್ ಕುಮಾರ್ ನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣ ಕೇರಳ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದ್ದು ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ಸಿಎಂ ಕಚೇರಿಯ ಪಾತ್ರ ಇರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ವಿರೋಧ ಪಕ್ಷ ಯುಡಿಎಫ್ ನಾಯಕ ರಮೇಶ್ ಚೆನ್ನಿತ್ತಲ ಪಿಣರಾಯಿ ವಿಜಯನ್ ಸರಕಾರದ ವಿರುದ್ಧ ಆರೋಪ ಮಾಡಿದ್ದು, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಇಷ್ಟಾಗುತ್ತಿದ್ದಂತೆ ಸಿಎಂ ಪಿಣರಾಯಿ ವಿಜಯನ್, ಕೇರಳ ಐಟಿ ಸೆಲ್ ನ ಮುಖ್ಯ ಕಾರ್ಯದರ್ಶಿ ಆಗಿ ಕರ್ತವ್ಯದಲ್ಲಿದ್ದ ಐಎಎಸ್ ಅಧಿಕಾರಿ ಕೆ.ಶಿವಶಂಕರ್ ಅವರನ್ನು ಅಮಾನತು ಮಾಡಿದ್ದಾರೆ. ಅಲ್ಲದೆ, ಮ್ಯಾನೇಜರ್ ಹುದ್ದೆಯಲ್ಲಿದ್ದ ಸ್ವಪ್ನಾ ಸುರೇಶ್ ಅವರನ್ನು ಹುದ್ದೆಯಿಂದಲೇ ಕಿತ್ತು ಹಾಕಿದ್ದಾರೆ. ಮುಖ್ಯಮಂತ್ರಿ ಕಚೇರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಸ್ವಪ್ನಾಳನ್ನು ಐಟಿ ಸೆಲ್ ಮ್ಯಾನೇಜರ್ ಆಗಿ ನೇಮಕ ಮಾಡಿಕೊಂಡಿದ್ದೇ ಗೊತ್ತಿಲ್ಲ. ಸ್ವಪ್ನಾಳ ಬಗ್ಗೆ ತಮಗೇ ಗೊತ್ತೇ ಇಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿಕೊಂಡಿದ್ದಾರೆ.

ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಸ್ವಪ್ನಾ

ಸ್ವಪ್ನಾ ಸುರೇಶ್, ಕೇರಳ ಐಟಿ ಸೆಲ್ ನಲ್ಲಿ ಮ್ಯಾನೇಜರ್ ಆಗಿ ನೇಮಕ ಆಗುವುದಕ್ಕೂ ಮುನ್ನ ಯುಎಇ ಕಾನ್ಸುಲೇಟ್ ಕಚೇರಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸಕ್ಕಿದ್ದಳು. ಸರಿತ್ ಕುಮಾರ್ ಕೂಡ ಅಲ್ಲಿ ಉದ್ಯೋಗದಲ್ಲಿದ್ದ. ಆದರೆ, ಅಲ್ಲಿರುವ ಸಂದರ್ಭ ಅಧಿಕಾರ ದುರುಪಯೋಗ ಪ್ರಕರಣದಲ್ಲಿ ಸ್ವಪ್ನಾ ವಿರುದ್ಧ ಕ್ರೈಂ ಬ್ರಾಂಚ್ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು ಐಟಿ ಸೆಲ್ ಮ್ಯಾನೇಜರ್ ಆಗಿ ಹೇಗೆ ನೇಮಕ ಮಾಡಿದ್ದಾರೆ ಎಂದು ರಮೇಶ್ ಚೆನ್ನಿತ್ತಲ ಪ್ರಶ್ನೆ ಮಾಡಿದ್ದಾರೆ. ಐಟಿ ಸೆಲ್ ಚೇರ್ಮನ್ ಶಿವಶಂಕರ್ ಆಪ್ತೆಯೂ ಆಗಿದ್ದ ಸ್ವಪ್ನಾ ಬಗ್ಗೆ ಪಿಣರಾಯಿ ವಿಜಯನ್ ಗೂ ಗೊತ್ತು. ಈಗ ತನಗೇನು ಗೊತ್ತಿಲ್ಲವೆಂದು ನಾಟಕ ಮಾಡುತ್ತಿದ್ದಾರ0ದು ಆರೋಪಿಸಿದ್ದಾರೆ.


ಇತ್ತ ಕಸ್ಟಮ್ಸ್ ಅಧಿಕಾರಿಗಳು 30 ಕೇಜಿ ಚಿನ್ನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಸಿಎಂ ಕಚೇರಿಯಿಂದ ಫೋನ್ ಬಂದಿತ್ತು. ಅಧಿಕಾರಿಗಳಿಗೆ ಪ್ರಕರಣ ಮುಚ್ಚಿ ಹಾಕುವಂತೆ ಒತ್ತಡ ಹೇರಲಾಗಿತ್ತು ಎನ್ನುವ ಆರೋಪವನ್ನು ಪ್ರತಿಪಕ್ಷಗಳು ಮಾಡಿವೆ. ಇದಲ್ಲದೆ, ಸಿಎಂ ಕಚೇರಿಯ ಪ್ರಿನ್ಸಿಪಾಲ್ ಸೆಕ್ರೆಟರಿ ಮತ್ತು ಐಟಿ ಸೆಲ್ ಚೇರ್ಮನ್ ಆಗಿದ್ದ ಶಿವಶಂಕರ್ ಕೂಡ ಕರೆ ಮಾಡಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಶಿವಶಂಕರ್ ಅನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ಆದರೆ, ಗೋಲ್ಡ್ ಸ್ಮಗ್ಲಿಂಗ್ ಜಾಲದ ಕಿಂಗ್ ಪಿನ್ ಎನ್ನಲಾಗುತ್ತಿರುವ ಸ್ವಪ್ನಾ ಸುರೇಶ್ ದಿಢೀರ್ ತಲೆಮರೆಸಿಕೊಂಡಿರುವುದು ಸಿಎಂ ಕಚೇರಿಯ ಪಾತ್ರದ ಬಗ್ಗೆ ಅನುಮಾನ ಮೂಡುವಂತಾಗಿದೆ.


ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಕಳೆದ ಬಾರಿ ಸೋಲಾರ್ ಹಗರಣದಲ್ಲಿ ಸಿಎಂ ಉಮ್ಮನ್ ಚಾಂಡಿ ಕೂಡ ಇದೇ ರೀತಿ ಸರಿತಾ ನಾಯರ್ ಬಗ್ಗೆ ತನಗೆ ಗೊತ್ತೇ ಇಲ್ಲ ಎಂದಿದ್ದರು. ಕೊನೆಗೆ ಎಲ್ಲವೂ ಬಯಲಾಗಿತ್ತು. ಈಗ ಪಿಣರಾಯಿ ವಿಜಯನ್ ಕೂಡ ಸ್ವಪ್ನಾ ಬಗ್ಗೆ ತನಗೆ ತಿಳಿದಿಲ್ಲ ಎನ್ನುತ್ತಿದ್ದಾರೆ. ಇದು ಪಿಣರಾಯಿ ಹೇಳುತ್ತಿರುವ ದೊಡ್ಡ ಸುಳ್ಳು. ಪ್ರಕರಣದ ಹಿಂದೆ ದೊಡ್ಡ ಜಾಲ ಇರುವ ಸಂಶಯ ಇರುವುದಾಗಿ ಹೇಳಿದ್ದಾರೆ. ಇದೇ ವೇಳೆ, ತಿರುವನಂತಪುರದ ಯುಎಇ ಕಚೇರಿ ಕೂಡ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಹೇಳಿದೆ.