KARNATAKA
ವಿಜಯಪುರ: ಮೆಕ್ಕೆಜೋಳದ ಮೂಟೆಗಳಡಿ ಸಿಲುಕಿ ಇಬ್ಬರು ಕಾರ್ಮಿಕರ ಸಾವು
ವಿಜಯಪುರ, ಡಿಸೆಂಬರ್ 05: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ‘ರಾಜಗುರು ಇಂಡಸ್ಟ್ರೀಸ್’ ಗೋದಾಮಿನ ಆಹಾರ ಸಂಸ್ಕರಣಾ ಘಟಕದಲ್ಲಿ ಸೋಮವಾರ ಸಂಜೆ ಮೆಕ್ಕೆ ಜೋಳದ ಮೂಟೆಗಳು ಉರುಳಿ ಬಿದ್ದು, ಅವುಗಳ ಅಡಿ ಸಿಲುಕಿದ 13 ಜನರ ಪೈಕಿ ನಾಲ್ವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಉಸಿರುಗಟ್ಟಿ ಇಬ್ಬರು ಸಾವಿಗೀಡಾಗಿದ್ದು, ಮೃತದೇಹ ಪತ್ತೆಯಾಗಿವೆ.
ಮೊದಲ ಹಂತದಲ್ಲಿ ಮೂವರು ಕಾರ್ಮಿಕರನ್ನು ರಕ್ಷಿಸಿದ ಸಿಬ್ಬಂದಿ, ಇನ್ನೊಬ್ಬರನ್ನು ಮಧ್ಯರಾತ್ರಿ 12ರ ಸುಮಾರಿಗೆ ರಕ್ಷಿಸಲಾಯಿತು. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ. ಮೂಟೆಗಳಡಿ ಇನ್ನೂ 9 ಮಂದಿ ಕಾರ್ಮಿಕರು ಸಿಲುಕಿದ್ದು, ಕಾರ್ಯಾಚರಣೆ ಮುಂದುವರೆದಿದೆ. ನಾಲ್ಕು ಜೆಸಿಬಿ ಮತ್ತು ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ರಾತ್ರಿಯಿಡೀ ಕಾರ್ಯಾಚರಣೆ ನಡೆಯಿತು. ಮೂಟೆಗಳ ರಾಶಿ ತೆರವುಗೊಳಿಸಿ ಕಾರ್ಮಿಕರನ್ನು ಹೊರತಂದ ಕೂಡಲೇ, ಅವರಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಲೆಂದೇ ಸ್ಥಳದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸ್ಥಳದಲ್ಲೇ ಉಳಿದಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಜಿಲ್ಲಾಡಳಿತದ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಎಲ್ಲವನ್ನೂ ಪರಿಶೀಲಿಸುತ್ತಿದ್ದಾರೆ. ಕಾರ್ಯಾಚರಣೆ ವೇಗವಾಗಿ ಸಾಗಲು ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.
‘ಕಾರ್ಮಿಕರ ಮೇಲೆ ಬಿದ್ದಿರುವ ಮೂಟೆಗಳನ್ನು ತೆರವು ಮಾಡುವ ಕಾರ್ಯ ಭರದಿಂದ ನಡೆದಿದೆ. ರಾತ್ರಿ 9ರ ವೇಳೆಗೆ ಮೂವರನ್ನು ಸುರಕ್ಷಿತವಾಗಿ ಹೊರ ತರಲಾಗಿದೆ. ಇನ್ನುಳಿದವರ ಉಸಿರಾಟಕ್ಕೆ ತೊಂದರೆಯಾಗದಂತೆ ಆಮ್ಲಜನಕ ಪೂರೈಸಲಾಗುತ್ತಿದೆ. ಬೆಳಗಾವಿ, ಕಲಬುರ್ಗಿಯಿಂದ ಎಸ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಅಗತ್ಯ ಬಿದ್ದರೆ ಹೈದರಾಬಾದ್‌ನಿಂದ ಎನ್‌ಡಿಆರ್‌ಎಫ್ ತಂಡವನ್ನು ಕರೆತರಲು ಸಿದ್ಧತೆ ನಡೆದಿದೆ’ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸುದ್ದಿಗಾರರಿಗೆ ತಿಳಿಸಿದರು.
‘ಮೂಟೆಗಳ ಅಡಿಯಲ್ಲಿ ಸಿಲುಕಿರುವ ಬಹುತೇಕ ಕಾರ್ಮಿಕರು ಬಿಹಾರದವರು ಎಂಬುದು ಗೊತ್ತಾಗಿದೆ. ಹಲವು ವರ್ಷಗಳಿಂದ ಅವರು ಇಲ್ಲಿ ಕೆಲಸ ಮಾಡುತ್ತಿದ್ದರು. ರಾಜ್ ಗುರು ಫುಡ್ಸ್ ಗೋಡನ್ ಮಾಲೀಕ ಕಿಶೋರ್ ಜೈನ್ ಘಟನೆ ನಡೆದ ಬಳಿಕ ನಾಪತ್ತೆಯಾಗಿದ್ದು, ಶೋಧ ಮುಂದುವರೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯರಾತ್ರಿ 1 ಗಂಟೆಯ ನಂತರವೂ ವೇಗದ ಕಾರ್ಯಾಚರಣೆ ನಡೆದಿದ್ದು, ಸ್ಥಳದಲ್ಲಿ ಕಾರ್ಮಿಕರು ಮತ್ತು ಅವರ ಸಂಬಂಧಿಕರು ಬೀಡುಬಿಟ್ಟಿದ್ದಾರೆ. ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ರಕ್ಷಣಾ ಕಾರ್ಯಾಚರಣೆ ಜೊತೆಗೆ ಕಾರ್ಮಿಕರಿಗೆ ಆಮ್ಲಜನಕ ಪೂರೈಸುವ ಕಾರ್ಯವೂ ನಡೆದಿದೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ ಅವರು ಬೆಳಗಾವಿಯಿಂದ ವಿಜಯಪುರಕ್ಕೆ ರಾತ್ರಿ ಬಂದು, ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಇದೊಂದು ದೊಡ್ಡ ದುರಂತ. ಹೀಗೆ ಆಗಬಾರದಿತ್ತು. ಘಟನೆಯಲ್ಲಿ ಸಾವನಪ್ಪಿದವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಜೊತೆ ಮಾತನಾಡುವೆ. ಅಲ್ಲದೇ, ಮಾಲೀಕರಿಂದಲೂ ಸೂಕ್ತ ಪರಿಹಾರ ಕೊಡಿಸಲಾಗುವುದು’ ಎಂದರು.
ಸಚಿವರು ಘಟನೆಯಿಂದ ದುಃಖಿತರಾದ ಕಾರ್ಮಿಕರ ಕುಟುಂಬದವರು ಹಾಗೂ ಕಾರ್ಮಿಕ ಮುಖಂಡರೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು.
You must be logged in to post a comment Login