MANGALORE
ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಶಾಲೆಯ ಸನಿಹದ ಮದ್ಯದಂಗಡಿ ಮೇಲೆ ಕ್ರಮಕ್ಕೆ ಸೂಚನೆ

ವಿದ್ಯಾರ್ಥಿಗಳ ಹೋರಾಟಕ್ಕೆ ಜಯ : ಶಾಲೆಯ ಸನಿಹದ ಮದ್ಯದಂಗಡಿ ಮೇಲೆ ಕ್ರಮಕ್ಕೆ ಸೂಚನೆ
ಮಂಗಳೂರು, ಡಿಸೆಂಬರ್ 21: ನಗರದ ಶಾಲೆಯೊಂದರ ಸನಿಹದಲ್ಲೇ ಆರಂಭಿಸಲಾಗಿದ್ದ ಮದ್ಯದಂಗಡಿ ಮುಚ್ಚುವಂತೆ ಶಾಲೆಯ ಮಕ್ಕಳು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.
ಈ ಬಗ್ಗೆ ಕ್ರಮ ಕೊಳ್ಳುವಂತೆ ಜಿಲ್ಲಾಧಿಕಾರಿಗಳು ಅಬಕಾರಿ ಆಯುಕ್ತರಿಗೆ ಸೂಚಿಸಿದ್ದಾರೆ.

ಶಾಲೆಯ ಸನಿಹದಲ್ಲೇ ಬಾರ್ & ರೆಸ್ಟೋರೆಂಟ್ ಗೆ ಅನುಮತಿ ನೀಡಿದ್ದನ್ನು ಖಂಡಿಸಿ ನಗರದ ಕುಂಟಿಕಾನದಲ್ಲಿರುವ ಸೈಂಟ್ ಆ್ಯನ್ಸ್ ಶಾಲೆಯ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಕಳೆದ ಬಹು ದಿನಗಳಿಂದ ಹೋರಾಟ ನಡೆಸುತ್ತಿದ್ದರು.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿರುವ ದ.ಕ. ಜಿಲ್ಲಾಧಿಕಾರಿಗಳು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಬಕಾರಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಇದು ನಮ್ಮ ಹೋರಾಟಕ್ಕೆ ಸಂದ ಮೊದಲ ಜಯ ಎಂದು ಹರ್ಷ ವ್ಯಕ್ತಪಡಿಸಿರುವ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲಾಡಳಿತ ಮಂಡಳಿ, ಶಿಕ್ಷಕ-ರಕ್ಷಕರ ಸಂಘ, ಸಂಪೂರ್ಣ ನ್ಯಾಯ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರಿಗೆ `ಪೋಸ್ಟ್ ಕಾರ್ಡ್ ಚಳವಳಿ’ ನಡೆಸಿದ ಶಾಲೆಯ ವಿದ್ಯಾರ್ಥಿಗಳು ಬಾರ್ ಅನ್ನು ಬಂದ್ ಮಾಡಿಸಿ, ಕೇವಲ ರೆಸ್ಟೋರೆಂಟ್ ಗೆ ಮಾತ್ರ ಅವಕಾಶ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಲು ಒತ್ತಾಯಿಸಿದ್ದರು.