LATEST NEWS
ಕನ್ನಡದ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ್ ಇನ್ನಿಲ್ಲ

ಕನ್ನಡದ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ್ ಇನ್ನಿಲ್ಲ
ಬೆಂಗಳೂರು ಸೆಪ್ಟೆಂಬರ್ 20: ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸದಾಶಿವ ಬ್ರಹ್ಮಾವರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಬ್ರಹ್ಮಾವರ್ ಸಾಯುವ ಮುನ್ನಾ ತಮ್ಮ ಸಾವಿನ ಸುದ್ದಿಯ ವಿಚಾರ ನಮ್ಮ ಕುಟುಂಬದವರಿಗೆ ಹೊರತು ಬೇರೆ ಯಾರಿಗೂ ಗೊತ್ತಾಗಬಾರದು ಎಂದು ಹೇಳಿದ್ದರಂತೆ. ಈ ಹಿನ್ನೆಲೆಯಲ್ಲಿ ಅವರ ಮಾತಿನಂತೆ ಕುಟುಂಬದವರು ಯಾರಿಗೂ ತಿಳಿಸದೇ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆಯನ್ನು ಮುಗಿಸಿದ್ದಾರೆ.

ಕನ್ನಡದ ನೂರಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅವರು ನಟಿಸಿದ್ದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ಬ್ರಹ್ಮಾವರ್ ಕಳೆದ ವರ್ಷವಷ್ಟೇ ಕುಮಟಾದಿಂದ ನಾಪತ್ತೆಯಾಗಿದ್ದರು, ಕೆಲ ದಿನಗಳ ನಂತರ ಸಿಕ್ಕಾಗ ನಟ ಶಿವರಾಜ್ ಕುಮಾರ್, ಸುದೀಪ್ ಸಹಾಯ ಮಾಡಲು ಮುಂದಾಗಿದ್ದರು. ಆದರೆ ಸ್ವಾಭಿಮಾನಿ ಬ್ರಹ್ಮಾವರ್ ಅದನ್ನ ನಿರಾಕರಿಸಿದ್ದರು.
ಕನ್ನಡದ ಖ್ಯಾತ ಪೋಷಕ ಕಲಾವಿದ ಸದಾಶಿವ ಬ್ರಹ್ಮಾವರ್ ಇದುವರೆಗೆ ನೂರಾರು ಸಿನಿಮಾಗಳಲ್ಲಿ ಹಾಗೂ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣಹಚ್ಚಿದ್ದಾರೆ. ಬ್ರಹ್ಮಾವರ್ ಅವರ ಹೆಸರು ಚಿತ್ರಪ್ರೇಮಿಗಳಿಗೆ ಚಿರಪರಿಚಿತವಾಗಿದ್ದು, ಬೆಳ್ಳಿತೆರೆಯ ಮೇಲೆ ಮಿಂಚಿದ್ದಾರೆ. ಕಿಚ್ಚ ಸುದೀಪ್, ಡಾ. ರಾಜ್‌ಕುಮಾರ್, ಅಂಬರೀಶ್ ಸೇರಿ ಹಲವು ಪ್ರಸಿದ್ಧ ನಟರ ಜತೆ ಅಭಿನಯಿಸಿದ್ದಾರೆ.