LATEST NEWS
ಬಿರುಗಾಳಿಗೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಡೆ

ಮಂಗಳೂರು ಮೇ 16: ಸಮುದ್ರದಲ್ಲಿ ಏಕಾಏಕಿ ಎದ್ದ ಬಿರುಗಾಳಿಗೆ ಮಂಗಳೂರು ನಗರದಿಂದ ಲಕ್ಷದ್ವೀಪಕ್ಕೆ ಸರಕು ಹಾಗೂ ಆಹಾರ ಸಾಮಗ್ರಿ ಸಾಗಾಟ ಮಾಡುತ್ತಿದ್ದ ಮಿನಿ ಹಡಗೊಂದು ಸಮುದ್ರ ತೀರದಿಂದ ಸುಮಾರು 75 ನಾಟಿಕಲ್ ಮೈಲ್ ದೂರದಲ್ಲಿ ಸಮುದ್ರದ ಮಧ್ಯೆ ಮುಳುಗಡೆಯಾಗಿದೆ. ಅದೃಷ್ಟವಶಾತ್ ಈ ಹಡಗಿನಲ್ಲಿದ್ದ 6 ಮಂದಿ ಸಿಬ್ಬಂದಿ ಪಾರಾಗಿದ್ದಾರೆ.
ಮಿನಿ ಸರಕು ಸಾಗಾಟ ಹಡಗಿನಲ್ಲಿದ್ದ ಸಿಬ್ಬಂದಿಗಳಾದ ಇಸ್ಮಾಯಿಲ್ ಶರೀಫ್, ಅಲೆಮನ್ ಅಹ್ಮದ್ ಬಾಯ್ ಗಾವ್ಡ, ಕಾಕಲ್ ಸುಲೇಮಾನ್ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ, ಕಸಂ ಇಸ್ಮಾಯಿಲ್ ಮತ್ತು ಅಜ್ಮಲ್ ಅವಘಡದಿಂದ ಪಾರಾದವರು.
ಮಂಗಳೂರು ಹಳೆ ಬಂದರಿನಿಂದ ಎಂಎಸ್‌ವಿ ಸಲಾಮತ್ ಹಡಗು ಸೋಮವಾರ ಎಂ ಸ್ಯಾಂಡ್, ಜಲ್ಲಿ, ಸಿಮೆಂಟ್ ಹಾಗೂ ಆಹಾರ ಉತ್ಪನ್ನಗಳನ್ನು ಹೇರಿಕೊಂಡು ಲಕ್ಷದ್ವೀಪಕ್ಕೆ ಹೊರಟಿತ್ತು. ಈ ಮಿನಿ ಸರಕು ಸಾಗಾಟದ ಹಡಗು ಮೇ 18ರಂದು ಲಕ್ಷದ್ವೀಪದ ಕಡಮತ್ ದ್ವೀಪಕ್ಕೆ ತಲುಪಬೇಕಿತ್ತು. ಬುಧವಾರ ಮಧ್ಯಾಹ್ನ 12ರ ವೇಳೆಗೆ ಸಮುದ್ರದ ಮಧ್ಯೆ ಭಾರಿ ಗಾಳಿ, ಮಳೆ ಬೀಸಲಾರಂಭಿಸಿತು. ಇದರಿಂದ ಹಡಗು ಅಪಾಯಕ್ಕೆ ಸಿಲುಕಿತು. ಇದಾದ ಕೆಲವೇ ಹೊತ್ತಿನಲ್ಲಿ ಹಡಗು ಸಮುದ್ರದಲ್ಲಿ ಮುಳುಗಿಯೇ ಹೋಯಿತು. ಈ ಸಂದರ್ಭ ಹಡಗಿನಲ್ಲಿದ್ದ 6 ಮಂದಿ ಕಾರ್ಮಿಕರು (ಇವರಲ್ಲಿ ಇಬ್ಬರು ಮಂಗಳೂರಿನವರು ಮತ್ತು 4 ಮಂದಿ ಗುಜರಾತಿನವರು) ಸಮುದ್ರಕ್ಕೆ ಹಾರಿ ಡಿಂಗಿ ಬೋಟಿನ ಸಹಾಯದಿಂದ ಪ್ರಾಣ ಉಳಿಸಿಕೊಂಡಿದ್ದಾರೆ.

ಹಡಗು ಮುಳುಗಿರುವ ಬಗ್ಗೆ ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ಬಂದಿದ್ದು, ಕೂಡಲೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್‌ನ ‘ವಿಕ್ರಂ’ ಶಿಪ್‌ನಲ್ಲಿ ರಕ್ಷಣಾ ಕಾರ್ಯ ನಡೆಸಿದ್ದು, 6 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಲಾದ ಎಲ್ಲಾ 6 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ.