BANTWAL
ಭೂ ಅಭಿವೃದ್ಧಿ ಬ್ಯಾಂಕ್ ಗಳಿಗೆ ಚುನಾವಣೆ ಹಾಲಿ ಮತ್ತು ಮಾಜಿ ಶಾಸಕರ ನಡುವೆ ವಾಗ್ವಾದ
ಭೂ ಅಭಿವೃದ್ಧಿ ಬ್ಯಾಂಕ್ ಗಳಿಗೆ ಚುನಾವಣೆ ಹಾಲಿ ಮತ್ತು ಮಾಜಿ ಶಾಸಕರ ನಡುವೆ ವಾಗ್ವಾದ
ಬಂಟ್ವಾಳ ಜನವರಿ 26: ಭೂ ಅಭಿವೃದ್ಧಿ ಬ್ಯಾಂಕ್ ಗಳಿಗೆ ಇಂದು ಚುನಾವಣೆ ನಡೆದಿದ್ದು, ಬಂಟ್ವಾಳದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕರ ಗುಂಪಿನ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಘಟನೆ ನಡೆದಿದೆ. ಬ್ಯಾಂಕ್ ಚುನಾವಣೆಯಲ್ಲಿ ಪ್ರತಿ ಬಾರಿಯೂ ಬ್ಯಾಂಕ್ ನ ಸಭಾಂಗಣದಲ್ಲೇ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಬಂಟ್ವಾಳ ಶಾಸಕರ ಸೂಚನೆ ಮೇರೆಗೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿತ್ತು.
ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆ ನಡೆಯುತ್ತಿದ್ದ ಸ್ಥಳದಲ್ಲೇ ಮತ ಪ್ರಚಾರಕ್ಕೆ ತೊಡಗಿದ್ದರು. ಎರಡೂ ಕಡೆಯವರನ್ನೂ ಹೊರಗೆ ನಡೆಯುವಂತೆ ತಹಶಿಲ್ದಾರ್ ಮನವಿ ಮಾಡಿದ ಸಂದರ್ಭದಲ್ಲಿ ಮೊದಲು ನೀವು ಹೊರಗೆ ಹೋಗಿ ಎನ್ನುವ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ವಾಗ್ವಾದ ನಡೆದಿದೆ. ಒಂದು ಹಂತದಲ್ಲಿ ಮಾಜಿ ಸಚಿವರಾದ ರಮಾನಾಥ ರೈ ಹಾಗೂ ಹಾಲಿ ಶಾಸಕ ರಾಜೇಶ್ ನಾಯ್ಕ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.
ಈ ನಾಯಕರ ನಡುವೆ ಇವರ ಜೊತೆ ಬಂದ ಸಹಚರರೂ ಪರಸ್ಪರ ಹೊಡೆದಾಟಕ್ಕೆ ಸಿದ್ಧತೆ ನಡೆಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ತಹಶೀಲ್ದಾರ್ ಬಂಟ್ವಾಳ ಪೋಲೀಸರಿಗೆ ಎರಡೂ ಪಕ್ಷದವರನ್ನು ಹೊರಗೆ ಕಳುಹಿಸುವಂತೆ ಸೂಚಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ನಡೆಯುವ ಪ್ರದೇಶದಲ್ಲಿ ನಿಶೇಧಾಜ್ಞೆಯನ್ನೂ ಜಾರಿಗೆ ಮಾಡಿದ್ದಾರೆ ಬಳಿಕ ನಡೆದ ಚುನಾವಣಾ ಫಲಿತಾಂಶದಲ್ಲಿ 12 ಸದಸ್ಯ ಸ್ಥಾನದಲ್ಲಿ ಕಾಂಗ್ರೇಸ್ ಬೆಂಬಲಿತ 5 ಮಂದಿ ಹಾಗೂ ಬಿಜೆಪಿ ಬೆಂಬಲಿತ 7 ಸದಸ್ಯರು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಗೆ ಆಯ್ಕೆಯಾದರು. ಬೆಳ್ತಂಗಡಿ, ಸುಳ್ಯ, ಪುತ್ತೂರಿನಲ್ಲೂ ಚುನಾವಣೆ ನಡೆದಿತ್ತು.