LATEST NEWS
ಸ್ಮಾರ್ಟ್ ಸಿಟಿ ಕಾಮಗಾರಿ ಹಂಪನಕಟ್ಟೆ – ಬಾವುಟ ಗುಡ್ಡ ರಸ್ತೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು ನವೆಂಬರ್ 8: ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರದಾದ್ಯಂತ ಕಾಮಗಾರಿಗಳು ಬರದಿಂದ ಸಾಗುತ್ತಿದ್ದು, ಈಗ ಹಂಪನಕಟ್ಟೆ ರಸ್ತೆ ಕಾಂಕ್ರೀಟೀಕರಣ, ಒಳಚರಂಡಿ ಕಾಮಗಾರಿ ನಡೆಸಲು ನಿರ್ಧರಿಸಲಾಗಿದ್ದು, ಈ ಹಿನ್ನಲೆಯಲ್ಲಿ ಸುಮಾರು 60 ದಿನಗಳ ಕಾಲ ಹಂಪನಕಟ್ಟೆ ರಸ್ತೆ ಭಾಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬದಲಾವಣೆಗೊಳಿಸಿ ಮಂಗಳೂರು ನಗರ ಕಮಿಷನರ್ ವಿಕಾಸ್ ಕುಮಾರ್ ವಿಕಾಸ್ ಆದೇಶವನ್ನು ಹೊರಡಿಸಿದ್ದಾರೆ.
ಇಂದಿನಿಂದ ಜನವರಿ 6ನೇ ತಾರೀಕಿನವರೆಗೆ ಅಂದರೆ ಮುಂದಿನ 60 ದಿನಗಳ ಕಾಲ ರಸ್ತೆ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ. ಪೊಲೀಸ್ ಕಮಿಷನರ್ ಆದೇಶದಂತೆ, ಹಂಪನಕಟ್ಟೆ ಕಡೆಯಿಂದ ನವಭಾರತ್ ಸರ್ಕಲ್ ಕಡೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನವಭಾರತ್ ಸರ್ಕಲ್‌ನಿಂದ ಹಂಪನಕಟ್ಟೆ ಕಡೆಗೆ ಪ್ರವೇಶಿಸುವ ಎಲ್ಲಾ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಹಂಪನಕಟ್ಟೆ ಕಡೆಯಿಂದ ಬಾವುಟಗುಡ್ಡೆ, ಫಳ್ನೀರು ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಕೆ.ಎಸ್.ಆರ್ ರಸ್ತೆಯ ಮೂಲಕ ಪಿ.ವಿ.ಎಸ್ ಕಡೆಗೆ, ಅಂಬೇಡ್ಕರ್ ವೃತ್ತದ ಮುಖಾಂತರ ಸಂಚರಿಸಬೇಕು.

ಡಾ.ಅಂಬೇಡ್ಕರ್ ವೃತ್ತದ ಕಡೆಯಿಂದ ಹಂಪನಕಟ್ಟೆ ಕಡೆಗೆ ಬರುವ ವಾಹನಗಳು ಬಲ್ಮಠ ರಸ್ತೆಯಲ್ಲಿರುವ ಅರವಿಂದ ಮೋಟಾರ್ಸ್ ಶೋ ರೂಂ ಎದುರಿನ ಮಿಲಾಗ್ರಿಸ್ ಕ್ರಾಸ್ ರಸ್ತೆ ಮುಖಾಂತರ ಫಳ್ನೀರು ರಸ್ತೆ ಪ್ರವೇಶಿಸಿ ವೆನ್ಲಾಕ್ ಆಸ್ಪತ್ರೆಯ ಅಂಡರ್ ಪಾಸ್ ರಸ್ತೆಯ ಮೂಲಕ ರೈಲ್ವೇ ಸ್ಟೇಷನ್ ರಸ್ತೆ ಪ್ರವೇಶಿಸಿ ತಾಲೂಕು ಪಂಚಾಯತ್ ಕಚೇರಿ ಪಕ್ಕದ ಯು.ಪಿ.ಮಲ್ಯ ರಸ್ತೆ ಮುಖಾಂತರ ಎ.ಬಿ.ಶೆಟ್ಟಿ ಸರ್ಕಲ್‌ಗೆ ಬಂದು ಮುಂದೆ ಸಂಚರಿಸಬೇಕು ಆದೇಶದಲ್ಲಿ ತಿಳಿಸಲಾಗಿದೆ.
ಮಿಲಾಗ್ರಿಸ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ರೈಲ್ವೇ ಸ್ಟೇಷನ್‌ನಿಂದ ವೆನ್ಲಾಕ್ ಆಸ್ಪತ್ರೆಯ ಅಂಡರ್ ಪಾಸ್ ರಸ್ತೆ ಮುಖೇನ ಹಂಪನಕಟ್ಟೆಗೆ ಕಡೆಗೆ ಪ್ರವೇಶಿಸುವ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿದೆ.ಡಾ.ಅಂಬೇಡ್ಕರ್ ವೃತ್ತದ ಕಡೆಯಿಂದ ಬಾವುಟಗುಡ್ಡೆ ಕಡೆಗೆ ವಾಹನಗಳ ದ್ವಿಮುಖ ಸಂಚಾರಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.