Connect with us

    LATEST NEWS

    ಹಿಂದೂಗಳ ಹಬ್ಬದ ವೇಳೆಯ ದಿಢೀರನೆ ಚಾಲನೆಗೆ ಬರುವ ನಿಯಮಗಳು – ಕಾಂಗ್ರೇಸ್ ಪೌರುಷ ಏನಿದ್ದರೂ ಕೇವಲ ಹಿಂದುಗಳ ಮೇಲೆ ಮಾತ್ರ – ಶಾಸಕ ಕಾಮತ್

    ಮಂಗಳೂರು ನವೆಂಬರ್ 09: ಹಿಂದುಗಳ ಹಬ್ಬ ದೀಪಾವಳಿಯ ಸಂದರ್ಭದಲ್ಲಿಯೇ ಹತ್ತು ಹಲವು ನೆಪವೊಡ್ಡಿ ಹಬ್ಬದ ಸಂಭ್ರಮದ ವಾತಾವರಣಕ್ಕೆ ಅಡ್ಡಿಪಡಿಸುವ ತನ್ನ ಎಂದಿನ ಚಾಳಿಯನ್ನು ಕಾಂಗ್ರೆಸ್ ಸರ್ಕಾರ ಮತ್ತೆ ಶುರು ಮಾಡಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು.

    ದೀಪಾವಳಿಯ ಸಂದರ್ಭದಲ್ಲಿ ಮಾತ್ರ ಪಟಾಕಿ ವಿಷಯದಲ್ಲಿ ಇಲ್ಲ ಸಲ್ಲದ ನಿಯಮಾವಳಿಗಳನ್ನು ಹೇರಿ ಗೊಂದಲಮಯ ವಾತಾವರಣ ಸೃಷ್ಟಿಸುವುದು, ಆ ಮೂಲಕ ಹಿಂದೂ ಧಾರ್ಮಿಕ ಆಚರಣೆಗಳಿಗೆ ಹಂತ ಹಂತವಾಗಿ ಕಡಿವಾಣ ಹಾಕುವುದು, ಕಾಂಗ್ರೆಸ್ ಸರ್ಕಾರದ ಷಡ್ಯಂತ್ರ. ಹಿಂದುಗಳ ಹಬ್ಬದ ಸಮಯದಲ್ಲಿಯೇ ಧಿಡೀರನೆ ಚಾಲನೆಗೆ ಬರುವ ನಿಯಮಗಳು, ಕಡಿವಾಣಗಳು ಇನ್ನಿತರ ಯಾವುದೇ ಧರ್ಮಗಳ ಹಬ್ಬದ ಸಂದರ್ಭದಲ್ಲಿ ಕಂಡು ಬರುವುದೇ ಇಲ್ಲ. ಅದಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಧೈರ್ಯವೂ ಇಲ್ಲ. ಅವರ ಪೌರುಷ ಏನಿದ್ದರೂ ಕೇವಲ ಹಿಂದುಗಳ ಮೇಲೆ ಮಾತ್ರ. ಹಿಂದೂಗಳಿಗೆ ಏನು ಬೇಕಾದರೂ ಅನ್ಯಾಯ ಮಾಡಿ ಕೆಲವೊಂದಿಷ್ಟು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ಸುಮ್ಮನಾಗುತ್ತಾರೆ ಎಂದುಕೊಂಡರೆ ಅದು ಕಾಂಗ್ರೆಸ್ ಸರ್ಕಾರದ ಮೂರ್ಖತನ ಎಂದು ಶಾಸಕರು ಹೇಳಿದರು.

    ಹೇಗೆ ಒಂದು ಹುಲಿ ಉಗುರಿನಿಂದ ಕಾಂಗ್ರೆಸ್ ಸರ್ಕಾರ ತನ್ನ ಎಲ್ಲಾ ವೈಫಲ್ಯಗಳನ್ನು ಮರೆಮಾಚಿಸಿತೋ ಹಾಗೆಯೇ ಈಗ ಸರ್ಕಾರಿ ಉದ್ಯೋಗದ ಪರೀಕ್ಷೆಗಳ ಸಂದರ್ಭದಲ್ಲಿ ಹಿಂದೂ ಹೆಣ್ಣು ಮಕ್ಕಳ ಮಂಗಳ ಸೂತ್ರವನ್ನು, ಕಾಲುಂಗುರವನ್ನು ತೆಗೆಸಿ ಕಣ್ಣೀರು ಹಾಕಿಸಿದ್ದು, ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳನ್ನು ರಾಜಾರೋಷವಾಗಿ ಕೊಲೆ ಮಾಡಿ ಹೋಗುತ್ತಿರುವ ಪ್ರಕರಣ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಪಟಾಕಿ ವಿಷಯವನ್ನು ಮುನ್ನಲೆಗೆ ತಂದಿದೆ.

    ಹಾಗಾಗಿಯೇ ಜಿಲ್ಲೆಯಲ್ಲಿ ಪಟಾಕಿ ಮಳಿಗೆ ತೆರೆಯಲು ಈವರೆಗೂ ಇಲ್ಲದಿದ್ದ ಹತ್ತು ಹಲವು ಹೊಸ ನಿಯಮಗಳನ್ನು ಹೇರಲಾಗಿದೆ. ಅದರಲ್ಲೂ ಈ ಬಾರಿ ಕೇವಲ ಮೂರ್ನಾಲ್ಕು ಮೈದಾನದಲ್ಲಿ ಮಾತ್ರ ಪಟಾಕಿ ಅಂಗಡಿಗಳನ್ನು ಹಾಕಲು ಅವಕಾಶ ನೀಡಲಾಗಿದೆ. ಬೈಕಂಪಾಡಿ ಎಪಿಎಂಸಿ, ಕೇಂದ್ರ ಮೈದಾನ, ಪಚ್ಚನಾಡಿ, ಬೋಂದೇಲ್ ಹೀಗೆ ಕೆಲವು ಮೈದಾನಗಳಲ್ಲಿ ಮಾತ್ರ ಪಟಾಕಿ ಅಂಗಡಿಗಳಿಗೆ ಸ್ಥಳ ಗುರುತಿಸಲಾಗಿದೆ. ಆದರೆ ಎಷ್ಟೋ ಕಡೆಗಳಲ್ಲಿ ಮೈದಾನಗಳೇ ಇಲ್ಲ. ಹಾಗಾದರೆ ಈ ಹಿಂದೆ ಅಲ್ಲಿ ಪಟಾಕಿ ಅಂಗಡಿಗಳನ್ನು ಹಾಕುತ್ತಿದ್ದವರು ಈಗ ಎಲ್ಲಿ ಹೋಗಬೇಕು ಎಂಬ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿಲ್ಲ.

    ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಹೀಗೆ ಒಂದೊಂದು ಕಚೇರಿ ಅಲೆದರೂ ಕೂಡ ತಾತ್ಕಾಲಿಕವಾಗಿ ಪಟಾಕಿ ಹಾಕುವವರ ಸಮಸ್ಯೆ ಬಗೆಹರಿದಿಲ್ಲ. ಇದಕ್ಕೆಲ್ಲ ನೇರ ಕಾರಣ ರಾಜ್ಯ ಸರ್ಕಾರ ಸೃಷ್ಟಿಸಿದ ಅನಗತ್ಯ ಗೊಂದಲ! ವಾಸ್ತವದಲ್ಲಿ ತಾತ್ಕಾಲಿಕವಾಗಿ ಪಟಾಕಿ ಅಂಗಡಿ ಹಾಕುವವರು ಸುರಕ್ಷತಾ ದೃಷ್ಟಿಯಿಂದ ಸರ್ಕಾರದ ಎಲ್ಲಾ ನೀತಿ ನಿಯಮಗಳನ್ನು ಕೂಡ ಪಾಲಿಸಲು ಸಿದ್ದರಾಗಿದ್ದಾರೆ. ಆದರೆ ಈವರೆಗೂ ಇಲ್ಲದ ಅವೈಜ್ಞಾನಿಕ ನೀತಿ ನಿಯಮಗಳನ್ನು ಹೊಸದಾಗಿ ಸೃಷ್ಟಿಸಿದರೆ ಹೇಗೆ ಪಾಲಿಸುವುದು ಎಂಬುದು ತಾತ್ಕಾಲಿಕ ಪಟಾಕಿ ಅಂಗಡಿಯವರ ಪ್ರಶ್ನೆ.

    ಈಗಾಗಲೇ ಜಿಲ್ಲಾಡಳಿತ ಸೂಚಿಸಿರುವ ಕೇವಲ ಮೂರ್ನಾಲ್ಕು ಮೈದಾನಗಳಲ್ಲದೇ ಹೆಚ್ಚುವರಿ ಮೈದಾನಗಳಲ್ಲಿ ತಾತ್ಕಾಲಿಕ ಪಟಾಕಿ ಮಳಿಗೆ ಹಾಕಲು ಅವಕಾಶ ಮಾಡಿ ಕೊಡುವಂತೆ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಪಾಲಿಕೆ ಆಯುಕ್ತರು ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಸಲ್ಲಿಸಲಾಗಿದ್ದು ಅದಕ್ಕೆ ಅವಕಾಶ ಕೊಡುವಂತೆ ಶಾಸಕರು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply