Connect with us

    LATEST NEWS

    ಕಾಂಗ್ರೆಸ್ ಪಕ್ಷದ ಹುಟ್ಟು ಗುಣವೇ ಜನರನ್ನು ಮೂರ್ಖರನ್ನಾಗಿಸೋದು – ಶಾಸಕ ವೇದವ್ಯಾಸ್ ಕಾಮತ್

    ಮಂಗಳೂರು ಜೂನ್ 19: ಕಳೆದ ಒಂದು ವರ್ಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ ಕರ್ನಾಟಕದ ಜನತೆಯ ಮೇಲೆ ಸರ್ಕಾರ ದ್ವೇಷ ಸಾಧನೆಗೆ ಹೊರಟಿದ್ದು ಬೆಲೆ ಏರಿಕೆಯ ಅಸ್ತ್ರವನ್ನು ಉಪಯೋಗಿಸಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.


    ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು “ಎಲ್ಲವೂ ಉಚಿತ, ಪ್ರತಿಯೊಬ್ಬರಿಗೂ ಖಚಿತ, ಇದು ನಮ್ಮ ಗ್ಯಾರಂಟಿ” ಎನ್ನುತ್ತಾ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ನಿರಂತರವಾಗಿ “ಬೆಲೆ ಏರಿಕೆಯ ಗ್ಯಾರಂಟಿ” ನೀಡಿದ್ದರ ಪರಿಣಾಮವಾಗಿ ರಾಜ್ಯದ ಜನರು ಕಂಗಾಲಾಗಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್‌ ಡೀಸೆಲ್ ದರ ಏರಿಸಿ ಜನತೆಯನ್ನು ಇನ್ನಷ್ಟು ಸಂಕಟಕ್ಕೆ ದೂಡಲಾಗಿರುವುದು ಖಂಡನೀಯ ಎಂದರು. ಈಗಾಗಲೇ ಹಾಲು, ವಿದ್ಯುತ್, ಸಾರಿಗೆ ದರ, ಮನೆ ತೆರಿಗೆ, ರಿಜಿಸ್ಟ್ರೇಷನ್, ಸ್ಟ್ಯಾಂಪ್ ಡ್ಯೂಟಿ, ವಾಹನ ನೋಂದಣಿ, ಅಬಕಾರಿ ಸುಂಕ, ಸೇರಿದಂತೆ ಎಲ್ಲಾ ಅಗತ್ಯ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಜನಸಾಮಾನ್ಯರಿಗೆ ಇದು ಬಹುದೊಡ್ಡ ಹೊಡೆತವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ಇನ್ನೂ ಹೆಚ್ಚಳವಾಗಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಲಿದೆ. ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗದಿದ್ದರೂ, ಇಡೀ ದೇಶದ ಯಾವೊಂದು ರಾಜ್ಯದಲ್ಲೂ ತೈಲ ಬೆಲೆ ಏರಿಸದಿದ್ದರೂ, ನಮ್ಮ ರಾಜ್ಯದಲ್ಲಿ ಮಾತ್ರ ಧಿಡೀರನೆ ಜನಸಾಮಾನ್ಯರ ಜೇಬಿಗೆ “ಕೈ” ಹಾಕಿರುವುದು ಕಾಂಗ್ರೆಸಿನ ನೈಜ ಮುಖದ ಅನಾವರಣವಾಗಿದೆ.

    ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದ್ದು ಯಾವುದೇ ಕ್ಷೇತ್ರಗಳ ಅಭಿವೃದ್ಧಿಗೂ ಒಂದೇ ಒಂದು ರೂಪಾಯಿ ಬಿಡುಗಡೆಯಾಗುತ್ತಿಲ್ಲ. ಆದರೂ ಮಾನ್ಯ ಮುಖ್ಯಮಂತ್ರಿಗಳು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ, ಸುಭದ್ರವಾಗಿದೆ, ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ ಎಂದು ಪದೇ ಪದೇ ರಾಜ್ಯದ ಜನತೆಯ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಜನಸಾಮಾನ್ಯರಿಗೆ ಈ ಬೆಲೆಯೇರಿಕೆಯ ಹೊರೆ ಯಾಕೆ?

    ಈ ಸರ್ಕಾರ ತನ್ನ ಘೋಷಿತ ಗ್ಯಾರೆಂಟಿಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಜನರ ಮೇಲೆ ಬೆಲೆ ಏರಿಕೆಯ ಬರೆ ಹಾಕುವ ಬದಲು ರಾಜ್ಯದಲ್ಲಿ ಸರ್ಕಾರದ ಮೂಲಕವೇ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮೊದಲು ನಿಲ್ಲಿಸಬೇಕು. ಇತ್ತೀಚಿಗೆ ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 187 ಕೋಟಿ ರೂಪಾಯಿಗಳ ಭಾರೀ ಪ್ರಮಾಣದ ಭ್ರಷ್ಟಾಚಾರಕ್ಕೆ ಪ್ರಾಮಾಣಿಕ ಅಧಿಕಾರಿಯೊಬ್ಬರ ಆತ್ಮಹತ್ಯೆ ಹಾಗೂ ಸಚಿವರೊಬ್ಬರ ತಲೆದಂಡವಾಗಿದ್ದನ್ನು ರಾಜ್ಯ ಮಾತ್ರವಲ್ಲದೇ ಇಡೀ ದೇಶವೇ ಕಂಡಿದೆ. ಹಾಗಿದ್ದೂ ಅದಕ್ಕೆ ಕಡಿವಾಣ ಹಾಕದೇ ಜನಸಾಮಾನ್ಯರ ಮೇಲೆ ನಿರಂತರವಾಗಿ ಬೆಲೆ ಏರಿಕೆಯ ಹೊರೆಯನ್ನು ಹಾಕುವುದರಿಂದ ಜನಾಕ್ರೋಶದ ಕಟ್ಟೆಯೊಡೆಯುವುದು ನಿಶ್ಚಿತವಾಗಿದೆ. ಹಿಮಾಚಲ ಪ್ರದೇಶದಲ್ಲೂ ಇದೇ ಮಾದರಿಯಲ್ಲಿ ಸುಳ್ಳು ಗ್ಯಾರಂಟಿ ಅಸ್ತ್ರ ಪ್ರಯೋಗಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಲ್ಲಿನ ಜನರನ್ನು ನಂತರ ಭ್ರಮ ನಿರಸನಗೊಳಿಸಿತ್ತು. ಈಗ ಕರ್ನಾಟಕದ ಜನರ ಸರದಿಯಾಗಿದೆ. ಕಾಂಗ್ರೆಸ್ ಪಕ್ಷದ ಹುಟ್ಟು ಗುಣವೇ ಜನರನ್ನು ಮೂರ್ಖರನ್ನಾಗಿಸೋದು. ನಾಡಿನ ಪ್ರಜ್ಞಾವಂತ ಜನತೆ ಇಂತಹ ಜನ ವಿರೋಧಿ ಸರ್ಕಾರವನ್ನು ತೊಲಗಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಈಗೇನಾದರೂ ರಾಜ್ಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳಿಪಟಗೊಳ್ಳುವುದು ಮಾತ್ರವಲ್ಲ, ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಠೇವಣಿಗಳನ್ನು ಸಹ ಕಳೆದುಕೊಳ್ಳಲಿದೆ. ಅಷ್ಟರಮಟ್ಟಿಗೆ ಜನರು ಈ ಸರ್ಕಾರದ ದುರಾಡಳಿತದಿಂದ ರೋಸಿ ಹೋಗಿದ್ದಾರೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply