Connect with us

LATEST NEWS

ಸ್ಪೀಕರ್ ಖಾದರ್ ಗೆ ಶಾಸಕ ವೇದವ್ಯಾಸ್ ಕಾಮತ್ ಪತ್ರ

ಮಂಗಳೂರು ಮಾರ್ಚ್ 24: ರಾಜ್ಯ ಬಜೆಟ್ ಅಧಿವೇಶನದ ಕೊನೆಯ ದಿನದಂದು ಸ್ಪೀಕರ್ ಪೀಠಕ್ಕೆ ಅಗೌರವ ತೋರಿದರೆಂಬ ನೆಪವೊಡ್ಡಿ ಬಿಜೆಪಿಯ 18 ಸದಸ್ಯರನ್ನು 6 ತಿಂಗಳ ಕಾಲ ಅಮಾನತುಗೊಳಿಸಿದ ಸ್ಪೀಕ‌ರ್ ಯು.ಟಿ ಖಾದ‌ರ್ ರವರ ಕ್ರಮವನ್ನು ಪ್ರಶ್ನಿಸಿ ಶಾಸಕ ವೇದವ್ಯಾಸ ಕಾಮತ್ ರವರು ವಿಧಾನಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ.

ದೇಶದ ರಾಜಕೀಯ ಚರಿತ್ರೆಯನ್ನು ಗಮನಿಸುತ್ತಾ ಹೋದರೆ ಕರ್ನಾಟಕವು ಅತ್ಯಂತ ವೈಶಿಷ್ಟ್ಯಪೂರ್ಣ ರಾಜಕಾರಣದ ಹಿನ್ನಲೆಯನ್ನು ಹೊಂದಿರುವುದು ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಪ್ರಜಾಪ್ರಭುತ್ವದ ದೇಗುಲವೆಂದೇ ಗೌರವಿಸಲ್ಪಡುವ ನಮ್ಮ ವಿಧಾನಸೌಧವಂತೂ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಬಲ್ಲ ಘನತೆಯುಳ್ಳದ್ದು. ಅಂತಹ ಭವ್ಯ ಪರಂಪರೆಯ ಇತಿಹಾಸಕ್ಕೀಗ ನಮ್ಮ ತುಳುನಾಡಿನ ಭಾಗದ ಸಭಾಧ್ಯಕ್ಷರೇ ಕೊಡಲಿ ಏಟು ಹಾಕಿ ಶಾಶ್ವತ ಕಪ್ಪು ಚುಕ್ಕಿ ಇಟ್ಟದ್ದು ಮಾತ್ರ ಅತ್ಯಂತ ವಿಷಾದನೀಯ ಸಂಗತಿ.

ಗತಿಸಿ ಹೋದ ರಾಜ್ಯದ ವಿಧಾನಸಭೆಯ ಪುಟಗಳನ್ನು ತಿರುವುತ್ತಾ ಹೋದರೆ ಹೋರಾಟಗಳ ಸರಮಾಲೆಯೇ ಎದ್ದು ಕಾಣುತ್ತದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸುಗಮ ಕಲಾಪ ನಿರ್ವಹಣೆಯ ಮಹತ್ತರ ಜವಾಬ್ದಾರಿ ವಹಿಸಿಕೊಂಡಿರುವ ಸಭಾಧ್ಯಕ್ಷರು ಅದೆಂತಹ ಕಠಿಣ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದೇ ಸಂಯಮದಿಂದ ವರ್ತಿಸಿ ಶಾಸಕರ ಜವಾಬ್ದಾರಿಗಳನ್ನು ತಿಳಿ ಹೇಳಿ, ಸರ್ವ ಸದಸ್ಯರ ಹಕ್ಕು ಬಾಧ್ಯತೆಯ ಹೊಣೆಯನ್ನು ಹೊತ್ತಿದ್ದರು. ಆದರೆ ಪ್ರಸ್ತುತ ಮಾನ್ಯ ಸಭಾಧ್ಯಕ್ಷರು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ದುರಂತ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಡಿನ ಒಳಿತಿಗೆ ಧಕ್ಕೆಯಾಗುವ ಸಂಗತಿಗಳನ್ನು ಸದನದಲ್ಲಿ ಪ್ರಶ್ನಿಸುವುದು, ನ್ಯಾಯ ಬದ್ಧವಾಗಿ ವಿರೋಧಿಸುವುದು, ಪ್ರಾಮಾಣಿಕ ತನಿಖೆಗೆ ಆಗ್ರಹಿಸುವುದು ಪ್ರತಿಪಕ್ಷಗಳ ಜವಾಬ್ದಾರಿ ಮತ್ತು ಕರ್ತವ್ಯವಾಗಿದ್ದು ಅದನ್ನೇ ಬಿಜೆಪಿ ಸದಸ್ಯರು ಮಾಡಿದ್ದಾರೆ. ಸರ್ಕಾರ ಇದಕ್ಕೆ ಕಿವಿಗೊಡದೇ ಹಠಮಾರಿ ಧೋರಣೆ ತಾಳಿದರೆ ಸದನದಲ್ಲಿ ಹೋರಾಟ ಸಹಜ. ಆದರೆ ಈ ಪ್ರತಿಭಟನಾ ಸ್ವಾತಂತ್ರ್ಯವನ್ನೇ ಹತ್ತಿಕ್ಕುವ ದಮನಕಾರಿ ಆದೇಶ ಎಂಬಂತೆ ಸಭಾಧ್ಯಕ್ಷರು, ಆಡಳಿತ ಪಕ್ಷದವರ ಆಣತಿಗೆ ತಕ್ಕಂತೆ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ ಹದಿನೆಂಟು ಶಾಸಕರನ್ನು ಆರು ತಿಂಗಳು ಕಾಲ ಅಮಾನತುಗೊಳಿಸುವುದು ಪ್ರಬುದ್ಧ ರಾಜಕೀಯ ಅಧ್ಯಾಯಕ್ಕೆ ಅಂತ್ಯ ಹಾಡಿರುವುದರ ಸಂಕೇತ. ಶಾಸಕರುಗಳು ರಾಜ್ಯದ ಆಯಾ ವಿಧಾನಸಭಾ ಕ್ಷೇತ್ರದ ಜನತೆಯ ಧ್ವನಿಯಾಗಿರುವವರು. ಅಂತಹ ಧ್ವನಿಯನ್ನೇ ಅಡಗಿಸುತ್ತಾ ಹೋದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಎಲ್ಲಿದೆ?

ಮಾನ್ಯ ಸಭಾಧ್ಯಕ್ಷರೇ, ಈ ಹಿಂದೆ ಇದೇ ಸದನದಲ್ಲಿ ತಾವು ವಿರೋಧ ಪಕ್ಷದ ಉಪನಾಯಕರಾಗಿದ್ದಾಗ ಏನೇನು ಘಟನೆಗಳು ನಡೆದಿವೆ? ಯಾರೆಲ್ಲಾ ಅಂದಿನ ಸಭಾಧ್ಯಕ್ಷರ ಮೈಕ್ ಕಿತ್ತೆಸೆಯಲು ನೋಡಿದ್ದಾರೆ, ಹೇಗೆ ಅವರ ಮೇಲೆ ತೋಳೇರಿಸಿ ಹೋಗಿದ್ದಾರೆ, ಹೇಗೆ ಇನ್ನಿಲ್ಲದಂತೆ ಸಭಾಧ್ಯಕ್ಷರನ್ನು ಅವಮಾನಿಸಿದ್ದಾರೆಂದು ನಾಡಿನ ಜನರ ಗಮನದಲ್ಲಿದೆ. ಆದರೆ ಆಗ ಸಭಾಧ್ಯಕ್ಷ ಸ್ಥಾನದಲ್ಲಿದ್ದವರು, ಸಂಯಮದಿಂದ ವರ್ತಿಸಿದರೇ ಹೊರತು ಯಾರಿಗೂ ಇಷ್ಟೊಂದು ದೊಡ್ಡ ಶಿಕ್ಷೆ ನೀಡಿರಲಿಲ್ಲ ಎಂಬುದು ಗಮನಾರ್ಹ.

ಇದನ್ನೆಲ್ಲಾ ಗಣನೆಗೆ ತೆಗೆದುಕೊಂಡು ಮಾನ್ಯ ಸಭಾಧ್ಯಕ್ಷರು ಈ ಕೂಡಲೇ ಆಡಳಿತ ಪಕ್ಷದವರ ಒತ್ತಡಕ್ಕೆ ಮಣಿದು ನಿಯಮಬಾಹಿರವಾಗಿ ನೀಡಿರುವ ಅಮಾನತು ಆದೇಶವನ್ನು ಹಿಂತೆಗೆದುಕೊಂಡು ಸಭಾಧ್ಯಕ್ಷ ಪೀಠದ ಗೌರವವನ್ನು ಉಳಿಸಲಿ ಎಂಬ ಆಶಯದೊಂದಿಗೆ…

:- ಡಿ.ವೇದವ್ಯಾಸ ಕಾಮತ್
ಶಾಸಕರು, ಮಂಗಳೂರು ನಗರ ದಕ್ಷಿಣ

Share Information
Continue Reading
Advertisement
Click to comment

Leave a Reply

Your email address will not be published. Required fields are marked *